

Mauritius PM India Visit: ಭಾರತ ಮತ್ತು ಮಾರಿಷಸ್ ಕೇವಲ ಪಾಲುದಾರರಲ್ಲ, ಒಂದು ಕುಟುಂಬ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್ 11) ಹೇಳಿದರು.
ಮಾರಿಷಸ್ ಪ್ರಧಾನಿ ನವೀನಚಂದ್ರ ರಾಮಗೂಲಂ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾರಿಷಸ್ ಭಾರತದ ನೆರೆಹೊರೆ ಮೊದಲು ನೀತಿ ಮತ್ತು ವಿಷನ್ ಮಹಾಸಾಗರದ ಪ್ರಮುಖ ಸ್ತಂಭವಾಗಿದೆ ಎಂದು ಹೇಳಿದರು.
ಕಳೆದ ಮಾರ್ಚ್ನಲ್ಲಿ ಮಾರಿಷಸ್ನ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತು. ಆ ಸಮಯದಲ್ಲಿ, ನಾವು ನಮ್ಮ ಸಂಬಂಧಗಳಿಗೆ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಾನಮಾನವನ್ನು ನೀಡಿದ್ದೇವೆ. ಇಂದು, ನಾವು ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ವಿವರವಾಗಿ ಪರಿಶೀಲಿಸಿದ್ದೇವೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಜಾಗತಿಕ ದಕ್ಷಿಣಕ್ಕಾಗಿ ಭಾರತದ ಹೊಸ ದೃಷ್ಟಿಕೋನವನ್ನು ಘೋಷಿಸಿದರು ಮತ್ತು ಅದಕ್ಕೆ ಮಹಾಸಾಗರ ಎಂದು ಹೆಸರಿಸಿದರು, ಇದು ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಬಂದ ನೀತಿ ವಿಧಾನ ಎನ್ನಲಾಗಿದೆ. ಇದೇ ವೇಳೆ ಕಡಲ ಭದ್ರತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಉತ್ತೇಜಿಸಲು ಎಂಟು ಒಪ್ಪಂದಗಳಿಗೆ ಸಹಿ ಹಾಕಿದವು ಎಂದು ಮೂಲಗಳು ತಿಳಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ಗೂಲಂ, ಪ್ರಧಾನಿ ಮೋದಿಯವರನ್ನು ಶ್ಲಾಘಿಸಿ, ನಾವು ವಾರಣಾಸಿಯಲ್ಲಿ ಬಂದಿಳಿದಾಗ, ನಮಗೆ ದೊರೆತ ಸ್ವಾಗತವನ್ನು ನೋಡಿ ನಾನು ಮತ್ತು ನನ್ನ ಪತ್ನಿ ಆಶ್ಚರ್ಯಚಕಿತರಾದೆವು. ಈ ರೀತಿಯ ಸ್ವಾಗತ ಇದುವರೆಗೆ ಬೇರೆ ಯಾವುದೇ ಪ್ರಧಾನಿಗೆ ಸಿಕ್ಕಿಲ್ಲ ಎಂಬುದು ನನ್ನ ಭಾವನೆ, ನೀವು ಏಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗುತ್ತೀರಿ ಎನ್ನುವುದನ್ನು ಇಲ್ಲಿನ ವ್ಯವಸ್ಥೆ ನೋಡಿದರೆ ಅರ್ಥವಾಗುತ್ತಿದೆ ಎಂದರು.
ಮಂಗಳವಾರ ಮುಂಬೈಗೆ ಆಗಮಿಸಿದ ಮಾರಿಷಸ್ ಪ್ರಧಾನಿಯವರ ರಾಜ್ಯ ಭೇಟಿ ಸೆಪ್ಟೆಂಬರ್ 16 ರಂದು ಮುಕ್ತಾಯಗೊಳ್ಳಲಿದೆ.(ಏಜೆನ್ಸೀಸ್)