

Dr Vishnuvardhan: ಅಭಿನವ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್, ಇತ್ತೀಚೆಗೆ ನಿಧನರಾದ ನಟಿ ಬಿ.ಸರೋಜಾದೇವಿಗೆ ರಾಜ್ಯ ಸರ್ಕಾರ ಮರಣೋತ್ತರ ಕನಾರ್ಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ ಈ ವಿಷಯವನ್ನು ತಿಳಿಸಿದರು. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಇಡೀ ರಾಜ್ಯದ ಮನೆ ಮನ ತಲುಪಿರುವಂತಹ ದಿಗ್ಗಜ ನಟ ವಿಷ್ಣುವರ್ಧನ್ಗೆ, ಕರ್ನಾಟಕದ ಶ್ರೇಷ್ಠ ಪುರಸ್ಕಾರ ನೀಡಬೇಕು ಎನ್ನುವುದು ಅವರ ಕುಟುಂಬ ವರ್ಗ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳು ಬಯಕೆಯಾಗಿತ್ತು, ಅಂತಿಮವಾಗಿ ರಾಜ್ಯ ಸರ್ಕಾರ ಎಲ್ಲರ ಮನವಿಗೆ ಸ್ಪಂದಿಸಿ ಪ್ರಶಸ್ತಿ ಘೋಷಿಸಿದೆ.
ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ರ 75 ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ, ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಹಿರಿಯ ನಟಿಯರಾದ ಮಾಳವಿಕಾ ಅವಿನಾಶ್, ಜಯಮಾಲಾ, ಶ್ರುತಿ ಅವರು ಕೂಡ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಇತ್ತೀಚೆಗೆ ನಿಧನರಾದ ನಟಿ ಸರೋಜಾದೇವಿ ಅವರಿಗೂ ರಾಜ್ಯ ಸರ್ಕಾರ ಮರಣೋತ್ತರ ಪ್ರಶಸ್ತಿ ಘೋಷಿಸಿ ಗೌರವ ಸಲ್ಲಿಸಿದೆ. ಕನ್ನಡದ ಮಹಾಕವಿ ಕಾಳಿದಾಸ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಿ ಸರೋಜಾ ದೇವಿ, ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು.