ತೆರಿಗೆ ವ್ಯಾಜ್ಯದಲ್ಲಿ ಭಾರತಕ್ಕೆ ಸೋಲು - ಕೈರ್ನ್ ಕಂಪನಿಗೆ 10,500 ಕೋಟಿ ರೂಪಾಯಿ ವಾಪಸು ಮಾಡಲು ಆದೇಶ

Cairn company
Published on

ನವದೆಹಲಿ: ಪೂರ್ವಾನ್ವಯ ತೆರಿಗೆ ಹೇರಿಕೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ವ್ಯಾಜ್ಯವೊಂದರಲ್ಲಿ ಭಾರತಕ್ಕೆ ಸೋಲಾಗಿದ್ದು, ಬ್ರಿಟನ್​ನ ಕೈರ್ನ್ ಎನರ್ಜಿ ಕಂಪನಿಗೆ 10,500 ಕೋಟಿ ರೂಪಾಯಿ (1.40 ಬಿಲಿಯನ್ ಡಾಲರ್) ಮೊತ್ತವ ಮರಳಿಸುವಂತೆ ಆದೇಶಿಸಲಾಗಿದೆ. ಕೈರ್ನ್ ಎನರ್ಜಿ ಕಂಪನಿ ಹೂಡಿದ್ದ ದಾವೆಯ ವಿಚಾರಣೆ ನಡೆಸಿದ ಮೂವರು ಸದಸ್ಯರ ತೆರಿಗೆ ನ್ಯಾಯಮಂಡಳಿ ಈ ಸೂಚನೆ ನೀಡಿದೆ.

ತೆರಿಗೆ ವಸೂಲಿಗಾಗಿ ಸರ್ಕಾರ ಕೈರ್ನ್ ಎನರ್ಜಿಯ ಡಿವಿಡೆಂಡ್​ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಹಾಗೂ ತೆರಿಗೆ ಮರುಪಾವತಿಯನ್ನು ತಡೆ ಹಿಡಿದಿತ್ತು. ಅವೆಲ್ಲವನ್ನೂ ಬಡ್ಡಿ ಹಾಗೂ ವೆಚ್ಚ ಸಹಿತ ಮರಳಿಸುವಂತೆ 582 ಪುಟಗಳ ತೀರ್ಪಿನಲ್ಲಿ ಸೂಚಿಸಿದೆ. ಅದರ ಮೊತ್ತ 10,500 ಕೋಟಿ ರೂಪಾಯಿ ಆಗುತ್ತದೆ.

ಕೈರ್ನ್ ಇಂಡಿಯಾದ 2006-07ನೇ ಸಾಲಿನ ಆಂತರಿಕ ಪುನರ್​ಸಂಘಟನೆ ಹಿನ್ನೆಲೆಯಲ್ಲಿ 10,247 ಕೋಟಿ ರೂಪಾಯಿ ಪೂವಾನ್ವಯ ತೆರಿಗೆಯನ್ನು ಭಾರತ ಸರ್ಕಾರ ವಿಧಿಸಿದ್ದು ನ್ಯಾಯೋಚಿತವಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಈ ಮಂಡಳಿಯಲ್ಲಿ ಭಾರತದ ಒಬ್ಬ ಪ್ರತಿನಿಧಿಯೂ ಇದ್ದರು.

2ನೇ ಸೋಲು: ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಭಾರತಕ್ಕೆ ಆಗಿರುವ ಎರಡನೇ ಸೋಲು ಇದಾಗಿದೆ. ಸೆಪ್ಟೆಂಬರ್​ನಲ್ಲಿ ಬ್ರಿಟನ್​ನ ವೊಡಾಫೋನ್ ಸಮೂಹ 22,100 ಕೋಟಿ ರೂಪಾಯಿ ತೆರಿಗೆ ಪ್ರಕರಣದಲ್ಲಿ ಜಯ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net