

ಪರಶುರಾಮಪುರ: ಭಾರತದಲ್ಲಿ ಗುರು-ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸವಿದ್ದು, ಜಗತ್ತಿಗೆ ಈ ವಿಷಯದಲ್ಲಿ ದೇಶ ಗುರುವಿನ ಪಾತ್ರ ವಹಿಸುತ್ತಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ ಹೇಳಿದರು.
ತಿಮ್ಮಣ್ಣನಾಯಕನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ಸಮಾಜ ನಿರ್ಮಾತೃರು, ವಿದ್ಯಾರ್ಥಿಗಳು ದೇಶದ ಸಂಪತ್ತು ಆಗಿದ್ದು, ಶಿಕ್ಷಕರ ಮೇಲೆ ಗುರುತರ ಹೊಣೆ ಇದೆ. ಅದನ್ನು ನಿಭಾಯಿಸಬೇಕು. ವಿದ್ಯಾರ್ಥಿಗಳು ಉತ್ತಮ ಕಲಿಕೆಯತ್ತ ಒತ್ತು ನೀಡಬೇಕು ಎಂದರು.
ಗುರು, ಹಿರಿಯರನ್ನು ಗೌರವಿಸುವ ವ್ಯಕ್ತಿ ಭವಿಷ್ಯದಲ್ಲಿ ಉನ್ನತ ಸ್ಥಾನಮಾನದ ಜತೆಗೆ ನೆಮ್ಮದಿ ಜೀವನ ನಡೆಸುತ್ತಾನೆ. ಅದೇ ರೀತಿ ವೃತ್ತಿಯಲ್ಲಿ ಬದ್ಧತೆ ಮೆರೆದ ಶಿಕ್ಷಕ ಜೀವನದ ಅಂತ್ಯದವರೆಗೂ ಸಮಾಜದ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಹೇಳಿದರು.
ಮಕ್ಕಳು ತಪ್ಪು ಮಾಡುವುದು ಸಹಜ. ಇದೇ ಕಾರಣಕ್ಕೆ ಅವರನ್ನು ದೈಹಿಕ ದಂಡನೆಗೆ ಒಳಪಡಿಸುವುದು ಸರಿಯಲ್ಲ. ಬದಲಿಗೆ ತಪ್ಪನ್ನು ತಿದ್ದಿಕೊಂಡು ಸರಿದಾರಿಯಲ್ಲಿ ಸಾಗುವಂತೆ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ಪ್ರೌಢಾಶಾಲೆ ಮುಖ್ಯಶಿಕ್ಷಕ ಚನ್ನಕೇಶವ ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಕೊಡುವುದು ಅವರ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತೆ. ಪಾಲಕರು, ಶಿಕ್ಷಕರು ಕೂಡ ಮಕ್ಕಳ ಎದುರಿಗೆ ಮೊಬೈಲ್ ಬಳಕೆ ಮಾಡುವುದು, ಸದಾ ಟಿವಿ ನೋಡುವುದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ನಾವುಗಳು ಕೂಡ ಉತ್ತಮ ನಡೆ-ನುಡಿ ಬೆಳೆಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಶಿಕ್ಷಕರಾದ ಕಾಂತಾಮಣಿ, ರವಿ, ಜಯಮ್ಮ ಇತರರಿದ್ದರು.