

ನವದೆಹಲಿ: ಆಕಾಶದಲ್ಲಿ ನೂರಾರು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದೊಳಗೆ, ದಿಢೀರನೇ ತುರ್ತು ಪರಿಸ್ಥಿತಿ ಎದುರಾದಾಗ ಒಬ್ಬ ವ್ಯಕ್ತಿ ಪ್ರಾಣದ ಹಂಗು ತೊರೆದು ಮಾಡಿದ ಸಾಹಸದಿಂದ ಇಂದು 174 ಜನರ ಜೀವ ಉಳಿದಿದೆ.
ಹೌದು, ಫ್ಲೈದುಬೈ ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದಲೇ ಚಾಕು ಇರಿತಕ್ಕೆ ಒಳಗಾದರೂ, ಹೋರಾಡಿ ವಿಮಾನವನ್ನು ಪತನದಿಂದ ಪಾರು ಮಾಡಿದ ಭಾರತದ ಹೆಮ್ಮೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಈಗ ಇಡೀ ವಿಶ್ವವೇ ತಲೆಬಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಈ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅವರನ್ನು "ನಿಜವಾದ ನಾಯಕ" ಎಂದು ಬಣ್ಣಿಸಿದ್ದಾರೆ.
ಎಕ್ಸ್ (X) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಅತ್ಯಂತ ಗಂಭೀರ ಅಪಾಯದ ಪರಿಸ್ಥಿತಿಯಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾರ ಧೈರ್ಯವನ್ನು ಹಾಗೂ ಇತರರ ಪ್ರಾಣ ರಕ್ಷಿಸುವ ದೃಢ ಸಂಕಲ್ಪವನ್ನು ಪ್ರದರ್ಶಿಸಿದರು. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ಕ್ಯಾಪ್ಟನ್ ಮಚ್ಚಾರ್ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಮಚ್ಚಾರ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ಬೋಯಿಂಗ್ ವಿಮಾನವು ಆಕಾಶದಲ್ಲಿ ಹಾರಾಡುತ್ತಿದ್ದಾಗ, ಓಮನ್ ಮೂಲದ ಸಹ-ಪೈಲಟ್ ಹಠಾತ್ ಆಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ವಿಮಾನದ ನಿಯಂತ್ರಣ ಪಡೆದು, ಅದನ್ನು ಪತನಗೊಳಿಸುವುದೇ ಆತನ ಉದ್ದೇಶವಾಗಿತ್ತು ಎನ್ನಲಾಗಿದೆ.
ದಾಳಿಯ ನಂತರ ವಿಮಾನವು ಸುಮಾರು 14,000 ಅಡಿಗಳಷ್ಟು ಕೆಳಗೆ ಕುಸಿದಿದೆ. ಆಗ ವಿಮಾನದಲ್ಲಿದ್ದ ಪ್ರಯಾಣಿಕರ ಆಕ್ರಂದನ ಮುಗಿಲುಮುಟ್ಟಿದೆ. ಆದರೆ, ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದರೂ ಧೃತಿಗೆಡದ ಮಚ್ಚಾರ್, ದಾಳಿಕೋರನೊಂದಿಗೆ ಹೋರಾಡುತ್ತಲೇ, ಕಷ್ಟಪಟ್ಟು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಿಲು ತೆರೆದುಕೊಂಡಿದ್ದರಿಂದ ತಕ್ಷಣ ಎಚ್ಚೆತ್ತುಕೊಂಡ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ನುಗ್ಗಿ, ಆ ದುಷ್ಟ ಸಹ-ಪೈಲಟ್‌ನನ್ನು ಹೆಡೆಮುರಿ ಕಟ್ಟಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಮತ್ತೊಂದು ತಂಡದ ಪೈಲಟ್‌ಗಳು ವಿಮಾನದ ನಿಯಂತ್ರಣ ಪಡೆದು, ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದ್ದಾರೆ
ಘಟನೆಯ ಬಳಿಕ ತಬುಕ್‌ನ ಆಸ್ಪತ್ರೆಗೆ ದಾಖಲಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ, (ಏಜೆನ್ಸೀಸ್).