ಸುಂಕ ಕಡಿತ ಭಾರತಕ್ಕೆ ಈಗ ಅಮೆರಿಕ ದುಂಬಾಲು ನಿರೀಕ್ಷೆ

India America
Published on

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಭಾರತದೆದುರು ಸುಂಕ ಕಡಿತ ಮತ್ತು ಸುಂಕ ನಿಯಮಾವಳಿ ಸುಧಾರಣೆ ಕುರಿತಂತೆ ಅಮೆರಿಕ ಪ್ರಸ್ತಾವನೆ ಮಂಡಿಸುವ ನಿರೀಕ್ಷೆ ಇದೆ ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಸಂಸ್ಥೆ (ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್- ಜಿಟಿಆರ್​ಐ) ಹೇಳಿದೆ.

ಅಮೆರಿಕದ ಕಂಪನಿಗಳು ಮತ್ತು ರಫ್ತುದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊಂದಿರುವುದರಿಂದ ಈ ಪ್ರಸ್ತಾವನೆ ಸಮಾಲೋಚನೆಗೆ ಬರುವ ಸಾಧ್ಯತೆ ಇದೆ ಎಂದು ಜಿಟಿಆರ್​ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಭಾನುವಾರ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯಡಿ ಭಾರತ ಖರೀದಿಸಲಿರುವ ಅಕ್ಕಿ ಮತ್ತು ಗೋಧಿಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಅಮೆರಿಕ ಬೇಡಿಕೆ ಮಂಡಿಸಬಹುದು. ಕುಲಾಂತರಿ ತಳಿಗಳ ಮೇಲೆ ಹೇರಿರುವ ಆಮದು ನಿರ್ಬಂಧವನ್ನು ಸಡಿಲಿಸುವಂತೆಯೂ ಆಗ್ರಹಿಸಬಹುದು. ಅಷ್ಟೇ ಅಲ್ಲ, ಅಮೆರಿಕದ ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸುವಂತೆಯೂ ಕೇಳಬಹುದು.

ಭಾರತಕ್ಕೆ ಆಮದಾಗುವ ಹೈನುಗಾರಿಕೆ ಉತ್ಪನ್ನಗಳು ಕುಲಾಂತರಿ ತಳಿಯ ಆಹಾರವಲ್ಲ ಎಂಬ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಅಮೆರಿಕದ ಉತ್ಪನ್ನಗಳಿಗೆ ಈ ನಿಯಮದಿಂದ ವಿನಾಯಿತಿ ನೀಡುವಂತೆ ಕೋರಿಕೆ ಮಂಡಿಸುವ ಸಾಧ್ಯತೆ ಇದೆ. ಅಮೆಜಾನ್ ಮತ್ತು ವಾಲ್​ವಾರ್ಟ್ ಕಂಪನಿಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ವಿಧಿಸಿರುವ ಕೆಲವು ಷರತ್ತುಗಳನ್ನು ಮತ್ತು ಕಠಿಣ ನಿಯಮಗಳನ್ನು ಸಡಿಲಗೊಳಿಸುವಂತೆಯೂ ಕೋರಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net