ಮಂಗಳಯಾನಕ್ಕೆ ಭಾರತ ಸಮರ್ಥ

mission mars
Published on

ತಿರುವನಂತಪುರ: ಹೆಚ್ಚಿನ ಅಂತರಗ್ರಹ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಭಾರತ ಸಮರ್ಥವಾಗಿದೆ. ಬಾಹ್ಯಾಕಾಶ ಕ್ಷೇತ್ರದ ವಿಸ್ತರಣೆಯ ಮೂಲಕ ದೇಶದ ಒಟ್ಟಾರೆ ಪ್ರಗತಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉದ್ದೇಶವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ನಾವು ಚಂದ್ರ, ಮಂಗಳ ಅಥವಾ ಶುಕ್ರ ಯಾನ ಕೈಗೊಳ್ಳಲು ಸಮರ್ಥರಾಗಿದ್ದೇವೆ. ಆದರೆ, ಅದಕ್ಕಾಗಿ ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಜತೆಗೆ ಹೆಚ್ಚಿನ ಹೂಡಿಕೆಯೂ ಇರಬೇಕು. ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಬೇಕು. ಈ ಮೂಲಕ ದೇಶದ ಸಮಗ್ರ ಪ್ರಗತಿಗೆ ಕೊಡುಗೆ ನೀಡಬೇಕು. ಇದು ಇಸ್ರೋದ ಉದ್ದೇಶ ಎಂದು ಅವರು ಹೇಳಿದರು. ಚಂದ್ರಯಾನದ ಐತಿಹಾಸಿಕ ಯಶಸ್ಸಿನ ನಂತರ ಮೊದಲ ಬಾರಿಗೆ ಕೇರಳದ ರಾಜಧಾನಿಗೆ ಭೇಟಿ ನೀಡಿದ ಅವರು, ಶನಿವಾರ ರಾತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ದೀರ್ಘಾವಧಿಯ ದೂರದೃಷ್ಟಿ ಹೊಂದಿದ್ದು, ಇಸ್ರೋ ಇದನ್ನು ಕಾರ್ಯಗತಗೊಳಿಸಲು ಸಿದ್ಧವಾಗಿದೆ ಎಂದರು.

ಸಾಫ್ಟ್ ಲ್ಯಾಂಡಿಂಗ್ ಮಾತ್ರವಲ್ಲ. ಚಂದ್ರಯಾನ-3ರ ಸಂಪೂರ್ಣ ಅಂಶಗಳು ನೂರಕ್ಕೆ ನೂರರಷ್ಟು ಯಶಸ್ವಿಯಾಗಿವೆ. ಇಡೀ ದೇಶವು ಅದರ ಬಗ್ಗೆ ಹೆಮ್ಮೆಪಡುತ್ತಿದ್ದು, ನಮಗೆ ಬೆಂಬಲ ನೀಡುತ್ತಿದೆ. ಇಸ್ರೋದ ಮಹಾನ್ ಸಾಧನೆಯ ಭಾಗವಾಗಲು ನಾವು ಮತ್ತು ನಮ್ಮ ಸಹೋದ್ಯೋಗಿಗಳು ಸಂತೋಷ ಮತ್ತು ಹೆಮ್ಮೆಪಡುತ್ತಿದ್ದೇವೆ. ನಮ್ಮ ಮುಂದಿನ ಪ್ರಯತ್ನಗಳಲ್ಲಿ ಜನರು ತಮ್ಮ ಬೆಂಬಲವನ್ನು ಮುಂದುವರಿಸಬೇಕು ಎಂದು ಅವರು ವಿನಂತಿಸಿದರು. ಚಂದ್ರಯಾನ-3 ರ ರೋವರ್ ಮತ್ತು ಲ್ಯಾಂಡರ್​ಗಳು ಚಿತ್ರಗಳನ್ನು ಸೆರೆಹಿಡಿದಿವೆ. ಮುಂದಿನ ದಿನಗಳಲ್ಲಿ ಇಸ್ರೋ ತಂಡವು ಹೆಚ್ಚಿನ ಗುಣಮಟ್ಟದ ಚಿತ್ರಗಳಿಗಾಗಿ ಕಾಯುತ್ತಿದೆ. ಪ್ರಸ್ತುತ ಅವರು ಚಂದ್ರನ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ಮತ್ತು ಸಂಶೋಧನೆಗಳತ್ತ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಯನ್ನು ರ್ಸ³ಸಿ, ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಭಾರತವು ಇತಿಹಾಸ ಬರೆದಿದೆ ಎಂದರು.

ಆದಿತ್ಯ-ಎಲ್ 1 ಶೀಘ್ರ

ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯ ಆದಿತ್ಯ-ಎಲ್ 1 ಕುರಿತು ಮಾತನಾಡಿದ ಸೋಮನಾಥ್ ಅವರು, ಈ ಉಪಗ್ರಹವು ಸಿದ್ಧವಾಗಿದ್ದು, ಶ್ರೀಹರಿಕೋಟಾ ತಲುಪಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ. ಅಂತಿಮ ದಿನಾಂಕವನ್ನು ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು. ಉಡಾವಣೆ ನಂತರ, ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಭೂಮಿಯಿಂದ 125 ದಿನಗಳನ್ನು ತೆಗೆದುಕೊಳ್ಳುತ್ತದೆ. ನಾವು ಅಲ್ಲಿಯವರೆಗೆ ಕಾಯಬೇಕಾಗಿದೆ ಎಂದು ಅವರು ಹೇಳಿದರು.

ಉಷ್ಣತೆ ಮಾಹಿತಿ

ಇಸ್ರೋ ಭಾನುವಾರ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಮೂಲಕ ಚಂದ್ರನ ಮೇಲ್ಮೈ ಉಷ್ಣತೆ ಕುರಿತ ಪ್ರಯೋಗದ ಮೊದಲ ಅವಲೋಕನಗಳನ್ನು ಹಂಚಿಕೊಂಡಿದೆ. ಚಂದ್ರನ ಮೇಲ್ಮೈ ಹಾಗೂ ಸಮೀಪದ ಮೇಲ್ಮೈಯನ ತಾಪಮಾನ ವ್ಯತ್ಯಾಸಗಳನ್ನು ಇದು ತೋರಿಸುತ್ತದೆ. ಇದು ಚಂದ್ರನ ದಕ್ಷಿಣ ಧ್ರುವದ ಮೊದಲ ತಾಪಮಾನದ ವಿವರವಾಗಿದೆ. ಚಂದ್ರನ ಮೇಲ್ಮೈ ಥರ್ವೇಫಿಸಿಕಲ್ ಪ್ರಯೋಗವು ಚಂದ್ರನ ಮೇಲ್ಮೈ ತಾಪಮಾನ ಹಾಗೂ ಧ್ರುವದ ಸುತ್ತಲಿನ ಚಂದ್ರನ ಮೇಲ್ಮಣ್ಣಿನ ತಾಪಮಾನದ ವಿವರಗಳನ್ನು ಒದಗಿಸಿದೆ ಎಂದು ಇಸ್ರೋ ಹೇಳಿದೆ. ಈ ವೈಜ್ಞಾನಿಕ ಅವಲೋಕನಗಳು ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ಉಷ್ಣ ವರ್ತನೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net