ಗಲ್ವಾನ್​ ಘರ್ಷಣೆ ಬಳಿಕ ಎಲ್​ಎಸಿಯಲ್ಲಿ ಭದ್ರತೆ ಹೆಚ್ಚಿಸಿದ ಭಾರತ

itbp
Published on

ನವದೆಹಲಿ: ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರ ಜತೆಗಿನ ಗಲ್ವಾನ್​ ಘರ್ಷಣೆಯ ಬಳಿಕ ಭಾರತ ವಾಸ್ತವ ಗಡಿರೇಖೆಯುದ್ದಕ್ಕೂ (ಎಲ್​ಎಸಿ) ಭದ್ರತೆಯನ್ನು ಹೆಚ್ಚಿಸುತ್ತಿದೆ. ಇಂಡೋ ಟಿಬೇಟಿಯನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಪಡೆಯ 3 ಸಾವಿರಕ್ಕೂ ಹೆಚ್ಚು ಯೋಧರನ್ನು ಗಡಿ ಭದ್ರತೆಗಾಗಿ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಐಟಿಬಿಪಿಯ ಹಲವು ಯೋಧರು ದೇಶದ ವಿವಿಧೆಡೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇವರೆಲ್ಲರನ್ನೂ ಆ ಕರ್ತವ್ಯದಿಂದ ಮುಕ್ತಗೊಳಿಸಿ, ಗಡಿ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಟಿಬಿಪಿಯ 15 ಕಂಪನಿಗಳನ್ನು ಈಗಾಗಲೆ ಕೇಂದ್ರಾಡಳಿತ ಪ್ರದೇಶ ಲಡಾಖ್​ಗೆ ರವಾನಿಸಲಾಗಿದೆ. ಒಂದು ಕಂಪನಿ ಎಂದರೆ ಅಂದಾಜು 100ರಿಂದ 120 ಯೋಧರು ಇರುತ್ತಾರೆ. ಈಗ ರವಾನಿಸಲಾಗಿರುವ 15 ಕಂಪನಿಗಳು ಸೇರಿ ಒಟ್ಟು 30 ಕಂಪನಿಗಳನ್ನು ಭದ್ರತಾ ಕಾರ್ಯಕ್ಕಾಗಿ ಕೆಲವೇ ದಿನಗಳಲ್ಲಿ ಎಲ್​ಎಸಿಗೆ ರವಾನಿಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಪ್ರದೇಶದಲ್ಲಿನ ಎಲ್​ಎಸಿ ಬಳಿ ಸಾಮಾನ್ಯವಾಗಿ 7 ಸಾವಿರ ಯೋಧರು ಗಡಿ ಭದ್ರತೆಗಾಗಿ ಸದಾ ನಿಯೋಜನೆಗೊಂಡಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net