

ನವದೆಹಲಿ: ಕರೊನಾ ಸಮಸ್ಯೆಯಿಂದ ಮುಕ್ತರಾಗಲು ಈಗಾಗಲೇ ಹಲವಾರು ನಿಟ್ಟಿನಲ್ಲಿ ಔಷಧಗಳ ಸಂಶೋಧನೆ ನಡೆಯುತ್ತಲೇ ಇದೆ. ಸಂಶೋಧಿಸಲಾಗಿರುವ ಔಷಧ, ಲಸಿಕೆಗಳ ಪ್ರಯೋಗಗಳನ್ನೂ ರೋಗಿಗಳ ಮೇಲೆ ಮಾಡಲಾಗುತ್ತಿದ್ದು, ಕೆಲವು ಕೆಲ ಮಟ್ಟಿಗೆ ಯಶಸ್ಸನ್ನೂ ಕಂಡಿವೆ.
ಅಂಥ ಒಂದು ಆಶಾದಾಯಕ ಔಷಧಗಳ ಪೈಕಿ ಪ್ಲಾಸ್ಮಾ ಥೆರಪಿಯೂ ಒಂದು. ಕರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ ಕಾಣುತ್ತಿರುವ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾದ ಲಸಿಕೆ ಎಂದು ಹೇಳಲಾಗುತ್ತಿತ್ತು. ದಾನಿಗಳು ಪ್ಲಾಸ್ಮಾ ನೀಡಿದರೆ ಅದನ್ನು ಸೋಂಕಿತರ ಮೇಲೆ ಪ್ರಯೋಗ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ. ಇದೀಗ ಈ ಪ್ರಯೋಗ ಯಶಸ್ವಿ ಕಂಡಿದ್ದು, ಅಹಮದಾಬಾದ್‌ನ ಸ್ಮೃತಿ ಠಕ್ಕರ್ ಭಾರತದ ಮೊದಲ ಪ್ಲಾಸ್ಮಾ ದಾನಿ ಎನಿಸಿಕೊಂಡಿದ್ದಾರೆ.
ಕರೊನಾ ಸೋಂಕಿನಿಂದ ಗುಣ ಮುಖರಾದವರ ದೇಹದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ. ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸಲಾಗುತ್ತದೆ. ಕರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಅರ್ಹರು. ಇದೇ ಪ್ಲಾಸ್ಮಾ ಥೆರಪಿ. ಅಂಥ ದಾನ ಮಾಡುವ ಮೂಲಕ ಸ್ಮೃತಿ ಇದೀಗ ಮೊದಲ ದಾನಿ ಎನಿಸಿಕೊಂಡಿದ್ದಾರೆ.
ಪ್ಲಾಸ್ಮಾ ಥೆರಪಿ ಹಾಗೂ ದಾನದ ಕುರಿತಾಗಿ ವೈದ್ಯರು ಹೇಳಿರುವುದು ಹೀಗೆ: ‘ಮನುಷ್ಯರ ದೇಹದಲ್ಲಿ ದೇಹನಿರೋಧಕ ಶಕ್ತಿ ಹೆಚ್ಚಿಗೆ ಇದ್ದಷ್ಟು ಯಾವುದೇ ವೈರಸ್‌ಗಳು ಸುಲಭದಲ್ಲಿ ಅಟ್ಯಾಕ್ ಮಾಡುವುದಿಲ್ಲ. ಕರೊನಾ ವೈರಸ್ ಕೂಡ ಇದರಿಂದ ಹೊರತಾಗಿಲ್ಲ. ರೋಗವನ್ನು ಉಂಟು ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕರೊನಾ ವೈರಸ್‌ನಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.
ಅಂಥ ವ್ಯಕ್ತಿಗಳ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದು, ಅದನ್ನು ಸೋಂಕಿತರ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಲು ಅವಕಾಶವಿದೆ. ಒಬ್ಬ ರೋಗಿಗೆ ಒಂದು ಡೋಸ್ ಸಾಕಾಗುತ್ತದೆ. ಹೀಗಾಗಿ ಗುಣಮುಖರಾದವರು ಒಬ್ಬರೇ ಇಬ್ಬರು ಸೋಂಕಿತರಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.
ಮೊದಲ ದಾನಿ ಎನಿಸಿಕೊಂಡಿರುವ ಸ್ಮೃತಿ ತನ್ನ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ‘ಸೋಂಕುಮುಕ್ತಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 14 ದಿನಗಳ ಕ್ವಾರಂಟೈನ್‌ನಲ್ಲಿದ್ದೆ. ಈ ಸಂದರ್ಭದಲ್ಲಿ ವೈದ್ಯರು ರಕ್ತದಿಂದ ಪ್ಲಾಸ್ಮಾ ಕಣಗಳನ್ನು ನೀಡುವಿರಾ ಎಂದು ಕೇಳಿದರು. ಇದರಿಂದ ಇನ್ನೂ ಇಬ್ಬರು ಸೋಂಕಿತರಿಗೆ ಗುಣಮುಖ ಮಾಡಬಹುದು ಎಂದು ಅವರು ಹೇಳಿದರು. ಅದರ ಪ್ರಕ್ರಿಯೆಗಳನ್ನೆಲ್ಲಾ ಕೇಳಿದ ಬಳಿಕ ನಾನು ಸಮ್ಮತಿದೆ. ಕೇವಲ ಎರಡು ತಾಸಿನಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದವು’ ಎಂದಿರುವ ಸ್ಮೃತಿ, ಸೋಂಕಿನಿಂದ ಗುಣಮುಖರಾದವರೆಲ್ಲರೂ ಪ್ಲಾಸ್ಮಾ ಕಣಗಳನ್ನು ದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ಪ್ಲಾಸ್ಮಾ ಥೆರಪಿಯ ಫಲಿತಾಂಶಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತದೆ. ಏಕೆಂದರೆ ರೋಗಿಯಲ್ಲಿನ ರೋಗ ನಿರೋಧಕ ಶಕ್ತಿ ಭಿನ್ನವಾಗಿರುವ ಕಾರಣ, ಅದರ ಸಾಮರ್ಥ್ಯದ ಮೇಲೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ವೈದ್ಯರು. (ಏಜೆನ್ಸೀಸ್)