

ನವದೆಹಲಿ : ದೇಶದಲ್ಲಿ ಅತಿದೊಡ್ಡ ಲಸಿಕಾ ಕಾರ್ಯಕ್ರಮವಾಗಿ ಆರಂಭವಾದ ಕರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಡೋಸ್ಗಳನ್ನು ನೀಡಲಾಗಿದೆ. ಈ ರೀತಿಯಾಗಿ 10 ಕೋಟಿ ಡೋಸ್ಗಳನ್ನು ಅತ್ಯಂತ ವೇಗದಲ್ಲಿ ನೀಡಿದ ದೇಶ ನಮ್ಮದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಭಾರತ 85 ದಿನಗಳಲ್ಲಿ 100 ಮಿಲಿಯನ್ ಡೋಸ್ ಮಟ್ಟ ತಲುಪಿದರೆ, ಅಮೆರಿಕ ಮತ್ತು ಚೀನಾ ಇದೇ ಸಂಖ್ಯೆಯನ್ನು ಪೂರೈಸಲು ಕ್ರಮವಾಗಿ 89 ಮತ್ತು 102 ದಿನಗಳನ್ನು ತೆಗೆದುಕೊಂಡಿದ್ದವು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯವೂ ಮಾಹಿತಿ ನೀಡಿ 'ಕರೊನಾ ಮುಕ್ತ ಆರೋಗ್ಯವಂತ ಭಾರತದತ್ತ ಹೆಜ್ಜೆ' ಎಂದು ಟ್ವೀಟ್ ಮಾಡಿದೆ.
ಜಾಗತಿಕವಾಗಿ ನೀಡಲಾಗುತ್ತಿರುವ ಲಸಿಕೆಯ ದೈನಂದಿನ ಡೋಸ್ಗಳ ಸಂಖ್ಯೆಯನ್ನು ಗಮನಿಸಿದರೆ, ಭಾರತವು ದಿನಕ್ಕೆ ಸರಾಸರಿ 38,93,288 ಡೋಸ್ಗಳನ್ನು ನೀಡುವುದರೊಂದಿಗೆ ಅಗ್ರಸ್ಥಾನದಲ್ಲಿದೆ. ಏಪ್ರಿಲ್ 10 ರ ಸಂಜೆ 7.30 ಕ್ಕೆ ಬಂದ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ನೀಡಲಾಗಿರುವ ಕರೊನಾ ಲಸಿಕೆ ಡೋಸ್ಗಳ ಒಟ್ಟು ಸಂಖ್ಯೆ 10,12,84,282 ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಈವರೆಗೆ ನೀಡಲಾಗಿರುವ ಡೋಸ್ಗಳಲ್ಲಿ ಶೇ. 60.62 ರಷ್ಟನ್ನು ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ - ಈ ಎಂಟು ರಾಜ್ಯಗಳಲ್ಲಿ ನೀಡಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)