

ನವದೆಹಲಿ: ಲಡಾಖ್ನಲ್ಲಿ ಯೋಧರ ನೆತ್ತರು ಹರಿಸಿದ ಚೀನಾ ವಿರುದ್ಧ ಭಾರತ ಪ್ರತೀಕಾರದ ಕ್ರಮ ಮುಂದುವರಿಸಿದೆ. ಚೀನಾದ 106 ಆಪ್ಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ, ಆ ದೇಶದಿಂದ ಆಮದು ಮಾಡಿಕೊಳ್ಳಲಾಗುವ 371 ವಿವಿಧ ಬಗೆಯ ವಸ್ತುಗಳ ಗುಣಮಟ್ಟ ಪರಿಶೀಲಿಸಿ, ಈ ಪೈಕಿ ಕಳಪೆ ದರ್ಜೆಯವನ್ನು ನಿರ್ಬಂಧಿಸಲು ಮುಂದಾಗಿದೆ. ಈ ಮೂಲಕ ‘ಮೇಡ್ ಇನ್ ಚೀನಾ ಹಠಾವೋ’ ಉಪಕ್ರಮ ರಭಸವಾಗುವ ಸುಳಿವು ಸಿಕ್ಕಿದೆ.
ಚೀನಾ ವಸ್ತುಗಳ ಮೇಲೆ ಏಕಾಏಕಿ ನಿರ್ಬಂಧ ಹೇರಲಾಗುವುದಿಲ್ಲ. ಬದಲಾಗಿ ಅಲ್ಲಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಗುಣಮಟ್ಟ ಪರಿಶೀಲನೆ ಕಾರ್ಯ ಮತ್ತಷ್ಟು ಕಠಿಣವಾಗಲಿದೆ. ಆಮದು ವಸ್ತುಗಳನ್ನು ಕಡ್ಡಾಯವಾಗಿ ಭಾರತೀಯ ಮಾನಕಗಳ (ಇಂಡಿಯನ್ ಸ್ಟಾ್ಯಂಡರ್ಡ್ಸ್-ಐಎಸ್) ನಿಯಮಗಳಿಗೆ ಒಳಪಡಿಸಲಾಗುತ್ತದೆ. ಮುಂದಿನ ಮಾರ್ಚ್ ಒಳಗೆ ಈ ಕ್ರಮ ಕೈಗೊಳ್ಳುವ ತೀರ್ವನವಾಗಿದೆ. ಭಾರತದ ಮಾರುಕಟ್ಟೆಯನ್ನು ಆವರಿಸಿರುವ ಚೀನಾದ ಆಟಿಕೆ, ಉಕ್ಕು, ಎಲೆಕ್ಟ್ರಾನಿಕ್, ಟೆಲಿಕಾಂ, ಯಂತ್ರೋಪಕರಣ, ಗಾಜು, ರಬ್ಬರ್ಗಳ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಹೆಚ್ಚಿವೆ. ಹೀಗಾಗಿ ವಾಣಿಜ್ಯ ಸಚಿವಾಲಯ ಕಳೆದ ವರ್ಷವೇ ಈ ವಸ್ತುಗಳನ್ನು ಪಟ್ಟಿ ಮಾಡಿದೆ. ಇವುಗಳನ್ನೆಲ್ಲ ಸಂಪೂರ್ಣವಾಗಿ
ಪರಿಶೀಲಿಸಿದ ಬಳಿಕ ಕಳಪೆ ದರ್ಜೆಯದ್ದನ್ನು ಗುರುತಿಸಿ ನಿಷೇಧಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಚೀನಾ ಮೂಲದ ಅಥವಾ ಚೀನಾ ಕಂಪನಿಗಳ ಜತೆ ಸಹಯೋಗವಿರುವ 200 ಆಪ್ಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಡಲಿದೆ.
ಈಗಾಗಲೇ ಜೂನ್ ಅಂತ್ಯದಿಂದ ಜು.27ರವರೆಗೆ ಚೀನಾದ 106 ಆಪ್ಗಳನ್ನು ಸರ್ಕಾರ ನಿಷೇಧಿಸಿದೆ.
ಐದು ಪಟ್ಟು ಹೆಚ್ಚಳ: ಬಂದರುಗಳಲ್ಲೇ ಆಮದು ಉತ್ಪನ್ನಗಳ ಗುಣಮಟ್ಟ ಪರಿಶೀಲನೆಯ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಲು ಬಿಐಎಸ್ ನಿರ್ಧರಿಸಿದೆ. 2019-20ರಲ್ಲಿ ಕೇವಲ 20,000 ಉತ್ಪನ್ನಗಳ ಪರಿಶೀಲನೆ ನಡೆಸಲಾಗಿತ್ತು. 2020-21ರಲ್ಲಿ ಒಂದು ಲಕ್ಷಕ್ಕೂ ಅಧಿಕ ವಸ್ತುಗಳ ಗುಣಮಟ್ಟದ ಮೇಲೆ ನಿಗಾ ವಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ‘ಒಂದು ದೇಶ ಒಂದು ಗುಣಮಟ್ಟ’ ನಿಯಮ ಜಾರಿ ಪ್ರಕ್ರಿಯೆ ಕೂಡ ಆರಂಭವಾಗಿದೆಯೆಂದು ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ಏನೇನು ಪರಿಶೀಲನೆ?: ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಂಆರ್ಪಿ), ಪ್ಯಾಕೇಜಿಂಗ್ ನಿಯಮಗಳಾದ ಉತ್ಪನ್ನ ತಯಾರಾದ ದೇಶ, ಉತ್ಪಾದನೆ ದಿನಾಂಕ, ಅವಧಿ ಮುಗಿಯುವ ದಿನಾಂಕ.
ಕೇಂದ್ರದ ಉದ್ದೇಶವೇನು?: ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆ ಪುನಶ್ಚೇತನದತ್ತ ಕೇಂದ್ರ ಸರ್ಕಾರ ದೃಷ್ಟಿ ಹರಿಸಿದೆ. ಹೀಗಾಗಿ ವಿದೇಶಿ ಆಮದು ಅವಲಂಬನೆ ತಗ್ಗಿಸಿ ರಫ್ತು ಹೆಚ್ಚಿಸುವ ಮೂಲಕ ಆತ್ಮನಿರ್ಭರ (ಸ್ವಾವಲಂಬಿ) ಭಾರತ ಪರಿಕಲ್ಪನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಬಯಸಿದೆ. ಹೀಗಾಗಿ ಈ ಪ್ರಕ್ರಿಯೆಗೆ ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ವಸ್ತುಗಳ ಮೇಲೆ ಕಣ್ಣು: ಆಟಿಕೆಗಳು, ಉಕ್ಕಿನ ಕಂಬಿ, ಉಕ್ಕಿನ ಟ್ಯೂಬ್, ಎಲೆಕ್ಟ್ರಾನಿಕ್ಸ್ ವಸ್ತು, ಟೆಲಿಕಾಂ ವಸ್ತು, ಭಾರ ಯಂತ್ರೋಪಕರಣಗಳು, ಕಾಗದ, ರಬ್ಬರ್ ಉತ್ಪನ್ನ, ಗಾಜಿನ ವಸ್ತು
ಚೀನಿ ಉತ್ಪನ್ನಗಳ ಸಹಿತ ಆಮದಾಗುವ 371 ಸರಕುಗಳನ್ನು ವಾಣಿಜ್ಯ ಸಚಿವಾಲಯ ಗುರುತಿಸಿದೆ. ಈ ಪೈಕಿ ಬಹುತೇಕ ವಸ್ತುಗಳಿಗೆ ಡಿಸೆಂಬರ್ನೊಳಗೆ ಮಾನದಂಡ ನಿಗದಿಪಡಿಸಲಾಗುತ್ತದೆ. ಉಳಿದವುಗಳಿಗೆ ಮುಂದಿನ ವರ್ಷ ಮಾರ್ಚ್ನೊಳಗೆ ಪೂರ್ಣಗೊಳಿಸಲಾಗುತ್ತದೆ. |ಪ್ರಮೋದ್ ಕುಮಾರ್ ತಿವಾರಿ, ಬಿಐಎಸ್ ಮಹಾನಿರ್ದೇಶಕ