ಸೌರಶಕ್ತಿ ಉತ್ಪಾದನೆಯಲ್ಲಿ ಭಾರತದ ವಿಕ್ರಮ

ವಿಜಯವಾಣಿ (4)
Published on

ನವದೆಹಲಿ: ಭಾರತವು ಈ ವರ್ಷ 100 ಗಿಗಾ ವ್ಯಾಟ್ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಮೂಲಕ, ಮಹತ್ವದ ಮೈಲಿಗಲ್ಲನ್ನು ದಾಖಲಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಈ ಕುರಿತ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಇಲಾಖೆಯ ನಿರಂತರ ಬದ್ಧತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಇಂದು ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಗೆ ಬಂದಿದೆ. 2030ಕ್ಕೆ ಈ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್​ಗೆ ಹೆಚ್ಚಿಸಲಾಗುವುದು’ ಎಂದಿದ್ದಾರೆ.

100 ಗಿಗಾ ವ್ಯಾಟ್ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು 2022ರಲ್ಲಿಯೇ ಪೂರ್ಣಗೊಳಿಸಬೇಕಿತ್ತು. ಆದರೆ, ಕೋವಿಡ್ ಮತ್ತು ಲಾಕ್​ಡೌನ್ ಕಾರಣದಿಂದ ಅದು ಮುಂದಕ್ಕೆ ಹೋಯಿತು. ಆದಾಗ್ಯೂ, ಜಾಗತಿಕವಾಗಿ ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ನಾಯಕನ ಸ್ಥಾನವನ್ನು ವಹಿಸಿಕೊಂಡಿದೆ. 2014ರಲ್ಲಿ ಭಾರತದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಕೇವಲ 2 ಗಿಗಾ ವ್ಯಾಟ್​ಗಳಷ್ಟಿತ್ತು.

ಭಾರತದಲ್ಲಿ ಸೌರಶಕ್ತಿ ಬೇಡಿಕೆ ಶೇ.35ರಷ್ಟು ಹೆಚ್ಚಳವಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಬಳಕೆಗೆ ಕೇಂದ್ರ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಆ ಮೂಲಕ ಪಾರಂಪರಿಕ ಇಂಧನಗಳ ಬಳಕೆಯನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ ಎಂದು ಜೋಶಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net