

ನವದೆಹಲಿ: ಲಡಾಖ್ನ ಪೂರ್ವ ಭಾಗದಲ್ಲಿರುವ ವಾಸ್ತವ ಗಡಿರೇಖೆಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಯಾವುದೇ ಕ್ಷಣದಲ್ಲಿ ಯುದ್ಧ ಸಂಭವಿಸುವ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ 3,488 ಕಿ.ಮೀ. ಇರುವ ಗಡಿಯುದ್ದಕ್ಕೂ ಪೂರ್ಣಪ್ರಮಾಣದ ಸೇನೆಯನ್ನು ನಿಯೋಜಿಸಿದೆ. ಎಲ್ಎಸಿಗೆ ಹತ್ತಿರವಿರುವ ವಾಯುನೆಲೆಗಳನ್ನು ಹಾಗೂ ನೌಕಾಪಡೆಯನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಜೂ.15ರಂದು ನಡೆದಿದ್ದ ಘರ್ಷಣೆಯ ನಂತರದಲ್ಲಿ ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಾಣುತ್ತಿದ್ದರೂ, ಒಳಗೊಳಗೆ ಬೇಗುದಿ ಬೇಯುತ್ತಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರ ಜಮಾವಣೆಯನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದಕ್ಕೆ ಪೂರಕವಾಗಿ ವಾಯು ಮತ್ತು ನೌಕಾಪಡೆಯನ್ನು ಕೂಡ ಅದು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಈ ಎಲ್ಲ ವಿದ್ಯಮಾನದ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ಭಾಗದ ಎಲ್ಎಸಿ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು, ಯುದ್ಧೋಪಕರಣಗಳನ್ನು ನಿಯೋಜಿಸಿದೆ. ವಿಶೇಷವಾಗಿ ಕ್ಸಿನ್ಜಿಯಾಂಗ್ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಪಿಎಲ್ಎ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ಭಾರತೀಯ ಯೋಧರ ನಿಯೋಜನೆ ಹೆಚ್ಚಾಗಿದೆ. ಉಭಯ ರಾಷ್ಟ್ರಗಳು ವೈಮಾನಿಕ ಕಣ್ಗಾವಲನ್ನು ಹೆಚ್ಚಿಸಿವೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್ಟೇಕರ್ ನಿವೃತ್ತಿ
ಜೂ.15ರಂದು ರಕ್ತಸಿಕ್ತ ಘರ್ಷಣೆ ನಡೆದಿದ್ದ ಪ್ರದೇಶದಲ್ಲಿರುವ ಭಾರತದ ಪೆಟ್ರೋಲಿಂಗ್ ಪಾಯಿಂಟ್ 14ರ ಸುತ್ತಮುತ್ತ ಚೀನಿಯರ ಸೇನಾ ಜಮಾವಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ಪಾಯಿಂಟ್ ಅನ್ನು ವಶಪಡಿಸಿಕೊಳ್ಳಲು ಗಲ್ವಾನ್ ನಾಲೆಯನ್ನು ಚೀನಿಯರು ದಾಟಿ ಬಂದರೆ, ಪೂರ್ಣಪ್ರಮಾಣದಲ್ಲಿ ಮುಗಿಬೀಳುವಂತೆ ಅಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಮಿಲಿಟರಿ ಕಮಾಂಡರ್ಗಳು ಸೂಚನೆ ನೀಡಿದ್ದಾರೆ.
ಗಲ್ವಾನ್ ಮತ್ತು ಶಿಯೋಕ್ ನದಿಯ ಸಂಗಮದ ವೈ ಜಂಕ್ಷನ್ನಲ್ಲಿ ಜೂ.16ರಂದು ಇದ್ದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೂ.6ರಂದು ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ನಡೆದ ಮಾತುಕತೆಯಲ್ಲಿ ಒಪ್ಪಿಕೊಂಡಿರುವಂತೆ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಉಭಯ ರಾಷ್ಟ್ರಗಳು ಎಳ್ಳಷ್ಟೂ ಚಿಂತನೆ ನಡೆಸಿಲ್ಲ ಎಂದು ರಾಜತಾಂತ್ರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಕ್ಸಾಯ್ ಚಿನ್ ಪ್ರದೇಶದಲ್ಲಿ ಪಿಎಲ್ಎ ಯೋಧರ ಚಲನವಲನಗಳ ಮೇಲೆ ಹಿರಿಯ ಮಿಲಿಟರಿ ಕಮಾಂಡರ್ಗಳು ಹದ್ದಿನಕಣ್ಣಿಟ್ಟಿದ್ದಾರೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗೆ ಮಾಡಲು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತಕ್ಕೆ ಅಲ್ಲಿನ ಪರಿಸ್ಥಿತಿ ತಿಳಿಗೊಂಡಿದೆ. ಆದರೂ ಸೇನೆಗಳನ್ನು ಹಿಂಪಡೆಯುವಿಕೆ ಪ್ರಕ್ರಿಯೆ ಸದ್ಯ ನಡೆಯುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.