

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಜಾಗತಿಕವಾಗಿ ವೈರಸ್ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನಕ್ಕೇರಿದೆ. ಕಳೆದ 24 ತಾಸಿನಲ್ಲಿ 7,130 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 1.88 ಲಕ್ಷಕ್ಕೆ ಏರಿಕೆಯಾಗಿದೆ.
1.83 ಲಕ್ಷ ಸೋಂಕಿತರೊಂದಿಗೆ 8ನೇ ಸ್ಥಾನದಲ್ಲಿದ್ದ ಜರ್ಮನಿಯನ್ನು ಭಾರತ ಹಿಂದಿಕ್ಕಿದೆ. ಫ್ರಾನ್ಸ್ 1.88 ಲಕ್ಷಕ್ಕೂ ಅಧಿಕ ಪ್ರಕರಣಗಳೊಂದಿಗೆ 7ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಹೊಸ ಪ್ರಕರಣಗಳು ಗಣನೀಯವಾಗಿ ಏರಿಕೆಯಾದರೆ ಫ್ರಾನ್ಸ್ನ್ನೂ ಕೂಡ ಹಿಂದಿಕ್ಕುವ ಸಾಧ್ಯತೆ ಇದೆ. ದೇಶದಲ್ಲಿ ಕೇವಲ 15 ದಿನಗಳಲ್ಲಿ 1 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಮೇ 15ರಂದು 85 ಸಾವಿರ ಇದ್ದ ಸೋಂಕಿತರ ಸಂಖ್ಯೆ ಈಗ 1.88 ಲಕ್ಷಕ್ಕೆ ಏರಿಕೆಯಾಗಿದೆ. ಕರೊನಾಗೆ ಹೊಸದಾಗಿ 173ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 5,300ಕ್ಕಿಂತ ಹೆಚ್ಚಾಗಿದೆ. ಮೃತರ ಸಂಖ್ಯೆಯ ಜಾಗತಿಕ ಪಟ್ಟಿಯಲ್ಲಿ ಭಾರತ 13ನೇ ಸ್ಥಾನದಲ್ಲಿದೆ. ಜತೆಗೆ ಅತೀ ಹೆಚ್ಚು ಗಂಭೀರ ರೋಗಿಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ.
ದೇಶದಲ್ಲಿ 8 ಸಾವಿರಕ್ಕೂ ಅಧಿಕ ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅಮೆರಿಕದಲ್ಲಿ 17 ಸಾವಿರ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 67 ಸಾವಿರ ಪ್ರಕರಣಗಳು ವರದಿಯಾಗಿದ್ದು, 2,200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ನಲ್ಲಿ 1 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದು, 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ ಸೋಂಕಿತರ ಪ್ರಮಾಣ 22 ಸಾವಿರ ಕ್ಕಿಂತಲೂ ಹೆಚ್ಚಾಗಿದೆ. ದೇಶದಲ್ಲಿ ಈವರೆಗೆ 88 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದು, ಇನ್ನೂ 92 ಸಾವಿರ ಸಕ್ರಿಯ ಪ್ರಕರಣಗಳಿವೆ.
ದೆಹಲಿಯಲ್ಲಿ ನಿತ್ಯ ಸಾವಿರ ಕೇಸ್
ದೆಹಲಿಯಲ್ಲಿ ಕರೊನಾ ತೀವ್ರತೆ ಪಡೆದುಕೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಭಾನುವಾರ 1,295 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 19,844ಕ್ಕೆ ಏರಿಕೆಯಾಗಿದೆ. ಜತೆಗೆ 57 ಸಾವು ವರದಿಯಾಗಿದ್ದು, ಮೃತರ ಸಂಖ್ಯೆ 473ಕ್ಕೆ ಏರಿದೆ. ದೆಹಲಿಯಲ್ಲಿ ಗುರುವಾರ 1,024, ಶುಕ್ರವಾರ 1,105 ಹಾಗೂ ಶನಿವಾರ 1,163 ಹೊಸ ಪ್ರಕರಣಗಳು ವರದಿಯಾಗಿದ್ದವು. ಈವರೆಗೆ 8,478 ರೋಗಿಗಳು ಗುಣಮುಖರಾಗಿದ್ದು, ಇನ್ನೂ 10,893 ಸಕ್ರಿಯ ಪ್ರಕರಣಗಳಿವೆ.
200 ರೈಲುಗಳ ಸಂಚಾರ ಆರಂಭ
ರೈಲ್ವೆ ಇಲಾಖೆ ಸೋಮವಾರದಿಂದ 200 ಪ್ರಯಾಣಿಕರ ರೈಲುಗಳ ಸಂಚಾರ ಆರಂಭಿಸಲಿದ್ದು, ಮೊದಲ ದಿನ 1.45 ಲಕ್ಷ ಜನರು ಪ್ರಯಾಣಿಸುವ ನಿರೀಕ್ಷೆ ಇದೆ. ಜೂ.1 ರಿಂದ ಜೂ.30ರವರೆಗಿನ ಅವಧಿಗಾಗಿ ಸುಮಾರು 26 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಸಂಚರಿಸುತ್ತಿರುವ ಶ್ರಮಿಕ ವಿಶೇಷ ರೈಲುಗಳು ಹಾಗೂ ಮೇ 12ರಿಂದ ಸಂಚರಿಸುತ್ತಿರುವ 30 ಎಸಿ ರೈಲುಗಳನ್ನು ಹೊರತುಪಡಿಸಿ 200 ರೈಲುಗಳು ಸಂಚಾರ ನಡೆಸಲಿವೆ. ಪ್ರಯಾಣಿಕರು ರೈಲು ಹೊರಡುವುದಕ್ಕಿಂತ ಸುಮಾರು ಮುಕ್ಕಾಲು ತಾಸು ಮುಂಚೆ ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದ್ದು, ಟಿಕೆಟ್ ಹೊಂದಿರುವರಿಗೆ ಮಾತ್ರ ನಿಲ್ದಾಣದ ಒಳ ಬಿಡಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಎಲ್ಲ ಪ್ರಯಾಣಿಕರನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ರೋಗ ಲಕ್ಷಣವಿಲ್ಲದವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ.
ಕರೊನಾ ಲಸಿಕೆ ಶೇ. 99 ಯಶಸ್ವಿ
ಕರೊನಾ ನಿಗ್ರಹಕ್ಕೆ ಜಗತ್ತಿನಾದ್ಯಂತ ಸಿದ್ಧವಾಗುತ್ತಿರುವ ಲಸಿಕೆಗಳಲ್ಲಿ 10 ಕಂಪನಿಗಳ ಲಸಿಕೆಗಳು ಪ್ರಾಯೋಗಿಕ ಪರೀಕ್ಷೆ ಹಂತದಲ್ಲಿದ್ದು, ಇದರಲ್ಲಿ ಐದು ಲಸಿಕೆ ಚೀನಾದ ಕಂಪನಿಗಳಿಗೆ ಸೇರಿವೆ. ಅದರಲ್ಲಿ ಸಿನೊವಾಕ್ ಬಯೋಟೆಕ್ ಕಂಪನಿ ತಯಾರಿಸುತ್ತಿರುವ ಲಸಿಕೆ ಪ್ರಾಯೋಗಿಕ ಹಂತದಲ್ಲಿ ಹೆಚ್ಚು ಸಕಾರಾತ್ಮಕತೆ ತೋರಿಸಿದೆ ಎಂದು ತಿಳಿದುಬಂದಿದೆ. ಕೋತಿಗಳ ಮೇಲಿನ ಪ್ರಯೋಗ ಈಗಾಗಲೇ ಯಶಸ್ವಿಯಾಗದ್ದು, ಮಾನವರ ಮೇಲಿನ ಪ್ರಯೋಗದಲ್ಲಿ ಎರಡನೇ ಹಂತ ಪ್ರವೇಶಿಸಿದೆ. ಸುಮಾರು 1 ಸಾವಿರ ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗಿದ್ದು, ಸದ್ಯದ ಫಲಿತಾಂಶದ ಪ್ರಕಾರ ಲಸಿಕೆ ಶೇ.99 ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ಸಿನೊವಾಕ್ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಸದ್ಯ ಚೀನಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಮೂರನೇ ಹಂತದ ಪ್ರಯೋಗಕ್ಕಾಗಿ ಯುರೋಪ್ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿಯ ಸಂಶೋಧಕ ಲಾವೊ ಬೈಷಾನ್ ಹೇಳಿದ್ದಾರೆ. ಈ ಲಸಿಕೆ ಉತ್ಪಾದನೆಗೆ ಬೀಜಿಂಗ್ ಹೊರ ಹೊಲಯದಲ್ಲಿ ದೊಡ್ಡ ಕಾರ್ಖಾನೆ ಸ್ಥಾಪಿಸಲಾಗುತ್ತಿದ್ದು, ವರ್ಷಕ್ಕೆ 100 ಕೋಟಿಗೂ ಅಧಿಕ ಡೋಸ್ ಲಸಿಕೆ ತಯಾರಿಸುವ ಗುರಿ ಹೊಂದಲಾಗಿದೆ.
ಆಮ್ಲಜನಕ ಕೊರತೆ, 7 ರೋಗಿಗಳ ಸಾವು
ಮುಂಬೈ: ಇಲ್ಲಿನ ಜೋಗೇಶ್ವರಿ ಆಸ್ಪತ್ರೆಯಲ್ಲಿ ಒಂದೂವರೆ ಗಂಟೆ ಅವಧಿಯಲ್ಲಿ ಏಳು ಕರೊನಾ ವೈರಸ್ ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ. ಈ ಹಿಂದೆ ಎರಡು ವಾರಗಳ ಅವಧಿಯಲ್ಲಿ 12 ರೋಗಿಗಳು ಇದೇ ರೀತಿ ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರಿಲ್ಲದಿರುವುದು ರೋಗಿಗಳ ಸಾವಿಗೆ ಕಾರಣ ಎನ್ನಲಾಗಿದೆ. ಶನಿವಾರ ರಾತ್ರಿ, ಐಸಿಯುನಲ್ಲಿ ಇಬ್ಬರು ಹೊಸ ವೈದ್ಯರು ಹಾಗೂ ಇಬ್ಬರು ದಾದಿಯರು ಇದ್ದರು. ಅನಾರೋಗ್ಯ ರಜೆ ಮೇಲಿದ್ದ ಇಬ್ಬರು ಹಿರಿಯ ವೈದ್ಯರ ಬದಲಿಗೆ ಹೊಸ ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ರೋಗಿಗಳು ಮೃತಪಡುವ ಸಂದರ್ಭದಲ್ಲಿ ಐಸಿಯುನಲ್ಲಿ ವೈದ್ಯರು ಇರಲಿಲ್ಲ ಎನ್ನಲಾಗಿದೆ. ರೋಗಿಗಳು ಇಷ್ಟು ಬೇಗ ಮೃತಪಟ್ಟಿದ್ದನ್ನು ಇದುವರೆಗಿನ ನಮ್ಮ ವೃತ್ತಿಜೀವನದಲ್ಲಿ ಕಂಡೇ ಇರಲಿಲ್ಲ ಎಂದು ದಾದಿಯರು ತಿಳಿಸಿದ್ದಾರೆ.