

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ಶುರುವಾಗಿ ಕೆಲವು ತಿಂಗಳುಗಳೇ ಕಳೆದುಹೋಗಿವೆ.
ಒಂದೆಡೆ ಎರಡೂ ದೇಶಗಳ ನಡುವೆ ಸಮಸ್ಯೆ ಪರಿಹಾರಕ್ಕೆ ಮಿಲಿಟರಿ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ. ಆದರೆ ಗಡಿಯಲ್ಲಿ ಬಿಕ್ಕಟ್ಟು ದಿನೇದಿನೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರು ಇಂದು ಗಡಿ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ.
ಸದ್ಯ ಉಂಟಾಗಿರುವ ಭಾರತ-ಚೀನಾ ಗಡಿ ಸಂಘರ್ಷ ಹೊಸ ಸ್ವರೂಪದ್ದು. ಈ ರೀತಿ ಹಿಂದೆಂದೂ ಆಗಿರಲಿಲ್ಲ ಎಂದು ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯಿಂದ ಪೇಚಿಗೆ ಸಿಲುಕಿದ ಪಾದ್ರಿ; ಮೂವರ ವಿರುದ್ಧ ಎಫ್ಐಆರ್
ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, ಎರಡೂ ದೇಶಗಳ ನಡುವೆ ಉಂಟಾಗುತ್ತಿರುವ ಸಂಘರ್ಷ ಮುಂದೆ ಎದುರಾಗಬಹುದಾದ ದೊಡ್ಡ ವಿದ್ಯಮಾನದ ಒಂದು ಭಾಗ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಮಾತುಕತೆಯ ಅಗತ್ಯ ತುಂಬ ಇದೆ ಎಂದು ಹೇಳಿದರು.
ಈ ತಿಂಗಳ ಪ್ರಾರಂಭದಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ, ಜೈಶಂಕರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಅವರೊಂದಿಗೆ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುತ್ತಿದ್ದಾರೆ.
ಪೂರ್ವ ಲಡಾಖ್ನಲ್ಲಿ ಶುರುವಾಗಿರುವ ಗಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಐದು ಅಂಶಗಳ ಯೋಜನೆಗೆ ಎರಡೂ ದೇಶಗಳು ಒಪ್ಪಿದ್ದವು. ಆದರೆ ಅದಾದ ಬಳಿಕ ಕೂಡ ಚೀನಾ ತನ್ನ ದುರ್ಬುದ್ಧಿಯನ್ನು ಮುಂದುವರಿಸುತ್ತಲೇ ಇದೆ. (ಏಜೆನ್ಸೀಸ್)