

ಭಾರತದೊಂದಿಗೆ ಕೆನಡಾ (India-Canada Row) ಕಾಲುಕೆರೆದು ಜಗಳಕ್ಕೆ ನಿಂತಿದೆ. ಖಲಿಸ್ತಾನಿ ಉಗ್ರವಾದಿ ಗುಂಪಿನ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಮತ್ತು ಭಾರತದ ಏಜೆಂಟ್ಗಳು ಇದರಲ್ಲಿ ಭಾಗಿಯಾಗಿದ್ದರು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪದ ನಂತರ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷ ತೀವ್ರಗೊಂಡಿದೆ. ಭಾರತವು ಕೆನಡಾದಲ್ಲಿನ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಭಾರತದ ಹಿತಾಸಕ್ತಿಯ ವಿರುದ್ಧ ಕೆಲಸ ಮಾಡುವ ಸಿಖ್ ಪ್ರತ್ಯೇಕತಾವಾದಿಗಳಿಗೆ ಆಶ್ರಯ ನೀಡಿದ್ದಲ್ಲದೆ, ಭಾರತದ ವಿರುದ್ಧ ಕೆಲಸ ಮಾಡುವಂತೆ ಅವರಿಗೆ ಕುಮ್ಮಕ್ಕು ನೀಡುವ ಕೆಲಸವನ್ನೂ ಮಾಡುತ್ತಿರುವ ಕೆನಡಾ ಸರ್ಕಾರ ಈಗ ಭಾರತೀಯರ ಆಕ್ರೋಶವನ್ನು ಎದುರಿಸುವಂತಾಗಿದೆ. ಟ್ರುಡೋ ಮಾಡಿರುವ ಗುರುತರ ಹಾಗೂ ವಿವೇಚನಾರಹಿತ ಆಪಾದನೆಯನ್ನು ತಳ್ಳಿಹಾಕಿರುವ ಭಾರತವು ರಾಜತಾಂತ್ರಿಕ ಕ್ರಮಗಳ ಮೂಲಕ ಎದಿರೇಟು ನೀಡುತ್ತಿರುವುದು ಶ್ಲಾಘನೀಯವಾಗಿದೆ.
ಪಂಜಾಬ್ನಲ್ಲಿ ತಲೆದೋರಿದ್ದ ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದನೆಯನ್ನು 80ರ ದಶಕದಲ್ಲಿಯೇ ಭಾರತದಲ್ಲಿ ಮಟ್ಟ ಹಾಕಲಾಗಿದ್ದು, ಆ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಆದರೆ, ಖಲಿಸ್ತಾನ್ ಚಿಂತನೆಯ ಒಂದಿಷ್ಟು ಪಳೆಯುಳಿಕೆ ಹಾಗೂ ಕಳೆಯು ಕೆನಡಾದಂತಹ ರಾಷ್ಟ್ರಗಳಲ್ಲಿ ಈಗಲೂ ಉಳಿದುಕೊಂಡಿದೆ ಎಂಬುದು ಗಮನಾರ್ಹ. ತನ್ನ ರಾಜಕೀಯ ಹಿತಾಸಕ್ತಿಯನ್ನು ಸಾಧಿಸಿಕೊಳ್ಳಲು ಜಸ್ಟಿನ್ ಟ್ರುಡೋ ಈ ಬಗೆಯ ಸುಳ್ಳು ಆರೋಪ ಮಾಡುತ್ತಿದ್ದು, ಈಗ ಉದ್ಭವಿಸಿರುವ ಅನಗತ್ಯ ಬಿಕ್ಕಟ್ಟಿನ ಬಗ್ಗೆ ವಿವರಿಸಲು ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಅಲ್ಲಿ ಗಟ್ಟಿಯಾದ ದನಿಯಲ್ಲಿ ಕೆನಡಾದ ಸುಳ್ಳುಗಳನ್ನು, ಕುತಂತ್ರಗಳನ್ನು ಖಂಡಿಸಿ, ಸತ್ಯವನ್ನು ಮನವರಿಕೆ ಮಾಡಿಕೊಡಬೇಕು.
ಕೆನಡಾದಲ್ಲಿನ ಕೆಲ ಸಿಖ್ಖರು ಹಿಂದುಗಳ ವಿರುದ್ಧವೂ ಹಿಂಸಾಚಾರದಲ್ಲಿ ತೊಡಗಿದ್ದಾರೆ. ವಿದೇಶಿ ನೆಲದಿಂದ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹಿಂದುಗಳಿಗೆ ಕೆನಡಾ ತೊರೆದು ಭಾರತಕ್ಕೆ ಹೋಗುವಂತೆ ಕೆಲ ತಿಂಗಳ ಹಿಂದಷ್ಟೇ ಬೆದರಿಕೆ ಹಾಕಿದ್ದ. ಅಲ್ಲಿನ ಸರ್ಕಾರದ ಬೆಂಬಲದಿಂದಲೇ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಭಾರತವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಆರೋಪ ಹೊತ್ತಿರುವ ಖಲಿಸ್ತಾನ್ ಬೆಂಬಲಿಗರು ಮತ್ತು ಉಗ್ರಗಾಮಿಗಳಿಗೆ ಕೆನಡಾ ಬಹಳ ಹಿಂದಿನಿಂದಲೂ ಸುರಕ್ಷಿತ ಸ್ವರ್ಗವಾಗಿದೆ. ಖಲಿಸ್ತಾನಿಗಳ ಸವಾಲಿಗೆ ಕೆನಡಾದ ಸೌಮ್ಯ ಪ್ರತಿಕ್ರಿಯೆ ಕುರಿತಂತೆ 1982ರಲ್ಲಿಯೇ ಭಾರತೀಯ ರಾಜಕಾರಣಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಅಂದಿನ ಕೆನಡಾ ಪ್ರಧಾನಿ ಪಿಯರೆ ಟ್ರುಡೊಗೆ ಅವರಿಗೆ ದೂರು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಭಯೋತ್ಪಾದನೆಗೆ ಬೆಂಬಲ ನೀಡಿದ ಪಾಕಿಸ್ತಾನ ಅನುಭವಿಸುತ್ತಿರುವ ದುಸ್ಥಿತಿಯ ಉದಾಹರಣೆಯಿಂದ ಕೆನಡಾ ಪಾಠ ಕಲಿಯಬೇಕಾಗಿದೆ.
ರಾಜಕೀಯ ಲಾಭಕ್ಕಾಗಿ ಉಗ್ರರನ್ನು ಸಮರ್ಥಿಸಿಕೊಳ್ಳುವ ತಂತ್ರವು ತಿರುಮಂತ್ರವಾಗಬಹುದಾಗಿದೆ. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಹದಗೆಡಿಸಿಕೊಂಡರೆ ಅದರಿಂದ ಕೆನಡಾಕ್ಕೆ ನಷ್ಟ ಎಂಬುದನ್ನು ಆ ರಾಷ್ಟ್ರ ಅರ್ಥ ಮಾಡಿಕೊಂಡಿಲ್ಲ. ಭಾರತದ ವಿಷಯದಲ್ಲಿ ಇದೇ ರೀತಿ ಉದ್ಧಟತನ ತೋರಿದ್ದ ಮಾಲ್ದೀವ್ಸ್ ತನ್ನ ತಪ್ಪಿನ ಅರಿವಾಗಿ ದ್ವಿಪಕ್ಷೀಯ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಕೆನಡಾದ ಸುಳ್ಳುಗಳನ್ನು ಭಾರತ ಜಾಗತಿಕ ವಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ.