ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

ವಿಜಯವಾಣಿ (3)
Published on

ನವದೆಹಲಿ: ಭಾರತ ಮತ್ತು ಬ್ರಿಟನ್ ಮಂಗಳವಾರ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಫ್ರೀ ಟ್ರೇಡ್ ಅಗ್ರಿಮೆಂಟ್) ಸಹಿ ಹಾಕಿದ್ದು, ಇದು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ. 2022ರಿಂದ ಈವರೆಗೆ ಒಟ್ಟು 13 ಸುತ್ತಿನ ಚರ್ಚೆಗಳ ನಂತರ ಈ ಒಪ್ಪಂದ ಏರ್ಪಟ್ಟಿದೆ. ವ್ಯಾಪಾರ, ಹೂಡಿಕೆ, ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಇದರಿಂದ ಎರಡೂ ರಾಷ್ಟ್ರಗಳಿಗೆ ಸಾಕಷ್ಟು ಲಾಭವಾಗುವ ನಿರೀಕ್ಷೆಯಿದೆ. ಎರಡೂ ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವ್ಯಾಪಾರದ ಮೇಲಿನ ಸುಂಕಗಳನ್ನು ಕಡಿಮೆ ಮಾಡುವುದರ ಜೊತೆಗೆ ವ್ಯಾಪಾರಕ್ಕಿರುವ ಅಡೆತಡೆಗಳನ್ನೂ ಈ ಒಪ್ಪಂದ ನಿವಾರಿಸುತ್ತದೆ.

ಭಾರತದಿಂದ ರಫ್ತಾಗುವ ಜವಳಿ, ಕೃಷಿ ಉತ್ಪನ್ನಗಳು ಮತ್ತು ಔಷಧಗಳಿಗೆ ಬ್ರಿಟನ್​ನ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ. ಬ್ರಿಟನ್​ನಿಂದ ಭಾರತಕ್ಕೆ ಆಮದಾಗುವ ತಂತ್ರಜ್ಞಾನ, ಯಂತ್ರೋಪಕರಣಗಳು ಮತ್ತು ಸೇವೆಗಳಿಗೆ ಪ್ರವೇಶ ಸುಗಮವಾಗಲಿದೆ. ಉಭಯ ದೇಶಗಳ ನಡುವಿನ ಹೂಡಿಕೆಯ ಹರಿವಿಗೂ ಉತ್ತೇಜನ ಸಿಗಲಿದೆ. ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಬ್ರಿಟನ್​ನಿಂದ ಹೆಚ್ಚಿನ ಹೂಡಿಕೆಯಾಗುವ ನಿರೀಕ್ಷೆಯಿದೆ. ತಂತ್ರಜ್ಞಾನ ವರ್ಗಾವಣೆ ಮತ್ತು ಸಂಶೋಧನೆಯಲ್ಲಿ ಸಹಕಾರದ ಹೊಸ ಪರ್ವ ಇದರಿಂದ ಆರಂಭವಾಗಲಿದೆ. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಲಾಭವಾಗಲಿದೆ. ಕೃತಕ ಬುದ್ಧಿಮತ್ತೆ (ಎಐ), ಹಸಿರು ತಂತ್ರಜ್ಞಾನ ಮತ್ತು ಇತರ ಆವಿಷ್ಕಾರ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳಿಗೆ ಒತ್ತು ನೀಡಲಾಗುತ್ತದೆ.

ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ- ಬ್ರಿಟನ್​ನ ರಾಜತಾಂತ್ರಿಕ ಸಂಬಂಧ ಇದರಿಂದ ಬಲಗೊಳ್ಳಲಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ, ಈ ಒಪ್ಪಂದದಿಂದ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ. ವಿಶೇಷವಾಗಿ ವಿಕಸಿತ ಭಾರತ 2047 ಗುರಿಯನ್ನು ತಲುಪುವುದಕ್ಕೆ ಇದರಿಂದ ಭಾರತಕ್ಕೆ ಸಹಾಯವಾಗಲಿದೆ. ಭಾರತ ಈಗಾಗಲೇ 54 ದೇಶಗಳೊಂದಿಗೆ ಇಂತಹ ಒಪ್ಪಂದವನ್ನು ಹೊಂದಿದೆ.

ಇದಲ್ಲದೆ ‘ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್’ಗೂ ಇದೇ ವೇಳೆ ಎರಡೂ ದೇಶಗಳು ಸಹಿ ಹಾಕಿವೆ. ಒಂದು ದೇಶದಲ್ಲಿ ಕಾರ್ವಿುಕರು ಪಾವತಿಸುವ ಪಿಂಚಣಿಯಂತಹ ಸಾಮಾಜಿಕ ಭದ್ರತಾ ದೇಣಿಗೆಗಳನ್ನು ಮತ್ತೊಂದು ದೇಶವೂ ಮಾನ್ಯ ಮಾಡುವ ಮೂಲಕ ಎರಡು ಬಾರಿ ಪಾವತಿಸುವುದನ್ನು ತಡೆಯುವ ಪದ್ಧತಿಗೆ ಡಬಲ್ ಕಾಂಟ್ರಿಬ್ಯೂಷನ್ ಕನ್ವೆಷನ್ ಎನ್ನುತ್ತಾರೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ಕೆಲಸ ಮಾಡುವ ನೌಕರರಿಗೆ ಇದರಿಂದ ಅನುಕೂಲವಾಗುತ್ತದೆ.

ಹೆಚ್ಚಿನ ಉದ್ಯೋಗ ಸೃಷ್ಟಿ

ಈ ಒಪ್ಪಂದದಿಂದ ಭಾರತದಲ್ಲಿ ವಿಶೇಷವಾಗಿ ತಯಾರಿಕೆ, ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ. ಬ್ರಿಟನ್​ನ ಕಂಪನಿಗಳು ಭಾರತದಲ್ಲಿ ಕಾರ್ಯಾ ಚರಣೆ ವಿಸ್ತರಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net