

ನವದೆಹಲಿ: ಕ್ಷಿಪ್ರ ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆಯೇ ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಹತ್ವದ ರಕ್ಷಣಾ ಪಾಲುದಾರಿಕೆ ವಿಚಾರ ಪ್ರಸ್ತಾಪಿಸಿದ್ದಾರೆ. ರಕ್ಷಣಾ ಪರಿಕರಗಳಿಗೆ ರಷ್ಯಾ ಮೇಲಿನ ಅವಲಂಬನೆ ತಪ್ಪಬೇಕೆಂಬ ಅವರ ಇಂಗಿತ ಈ ಮೂಲಕ ವ್ಯಕ್ತವಾಗಿದೆ.
ಬುಧವಾರ ಭಾರತಕ್ಕೆ ಆಗಮಿಸಿದ ಜಾನ್ಸನ್ ಮೊದಲು ಗುಜರಾತ್ಗೆ ಭೇಟಿ ನೀಡಿ ಅಲ್ಲಿಂದ ದೆಹಲಿಗೆ ಆಗಮಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಮುಂದಿನ ತಲೆಮಾರಿನ ರಕ್ಷಣಾ ಮತ್ತು ಸುರಕ್ಷಾ ಪಾಲುದಾರಿಕೆ, ಆತ್ಮನಿರ್ಭರ ಭಾರತ ಉಪಕ್ರಮದಂತೆ ದೇಶೀಯವಾಗಿಯೇ ಸಮರ ವಿಮಾನ ಅಭಿವೃದ್ಧಿಪಡಿಸುವುದಕ್ಕೆ ನೆರವು ನೀಡುವುದಾಗಿ ಜಾನ್ಸನ್ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ಅವಲಂಬನೆ 50%: ಭಾರತ ಸರ್ಕಾರ 2016-2020ರ ನಡುವೆ ವಿದೇಶಗಳಿಂದ ಆಮದು ಮಾಡಿಕೊಂಡ ಯುದ್ಧೋಪಕರಣಗಳ ಪೈಕಿ ಶೇಕಡ 50 ರಷ್ಯಾದ್ದಾಗಿದೆ. ಭಾರತದ ಈ ಅವಲಂಬನೆ ತಗ್ಗಬೇಕೆಂಬ ನಿರೀಕ್ಷೆಯನ್ನು ಬ್ರಿಟನ್ ಹೊಂದಿದ್ದು, ಆ ಯತ್ನದ ಭಾಗವಾಗಿಯೇ ಬೋರಿಸ್ ಜಾನ್ಸನ್ ಈಗ ಬಂದಿರುವುದು. ಕಳೆದ ತಿಂಗಳು ಅಮೆರಿಕದ ಪ್ರಯತ್ನದ ಬಳಿಕ ಬ್ರಿಟನ್ ಪ್ರಯತ್ನ ನಡೆಸಿರುವುದು ಗಮನಾರ್ಹ.
ನೆಕ್ಸ್್ಟ ಜನರೇಶನ್ ಪಾಲುದಾರಿಕೆ: ಭಾರತಕ್ಕೆ ರಕ್ಷಣಾ ಮತ್ತು ಸುರಕ್ಷಾ ಕ್ಷೇತ್ರಗಳಲ್ಲಿ ಮುಂದಿನ ತಲೆಮಾರಿನ ಪಾಲುದಾರಿಕೆ ಒದಗಿಸುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭರವಸೆ ನೀಡಿದ್ದಾರೆ. ಈ ಪಾಲುದಾರಿಕೆಯು ಭೂ, ಸಮುದ್ರ, ವಾಯು, ಬಾಹ್ಯಾಕಾಶ ಮತ್ತು ಸೈಬರ್ ಎಂಬ 5 ವಿಭಾಗ ಒಳಗೊಂಡಿದೆ. ಇದು ನನಸಾದರೆ ರಷ್ಯಾ, ಬ್ರಿಟಿಷ್, ಫ್ರೆಂಚ್ ಯುದ್ಧ ವಿಮಾನಗಳು ಭಾರತದ ವಾಯುಪಡೆಯ ಬಲ ಹೆಚ್ಚಿಸಲಿದೆ. ಜಂಟಿ ಸಮರಾಭ್ಯಾಸಗಳು ಮತ್ತು ಅಧಿಕಾರಿಗಳ ನಡುವೆ ಮಾಹಿತಿ ವಿನಿಮಯ ಎಲ್ಲವೂ ಈ ಪಾಲುದಾರಿಕೆಯಲ್ಲಿ ಇರಲಿದೆ.
ಮಾತುಕತೆ ಸೂತ್ರ: ರಷ್ಯಾ- ಯೂಕ್ರೇನ್ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆಯೇ ಅಗತ್ಯ. ಕದನ ವಿರಾಮ ಘೋಷಿಸಬೇಕು. ರಾಜತಾಂತ್ರಿಕ ಮಾರ್ಗ ಮತ್ತು ಮಾತುಕತೆ ಮೂಲಕ ವಿವಾದ ಬಗೆಹರಿಸಬೇಕು. ಎಲ್ಲ ದೇಶಗಳು ಕೂಡ ಗಡಿ ಭಾಗ ಮತ್ತು ಆಯಾ ದೇಶಗಳ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಬ್ರಿಟನ್ ಪ್ರಧಾನಿ ಜಾನ್ಸನ್ ಕೂಡ ಇದಕ್ಕೆ ಪೂರಕ ಹೇಳಿಕೆ ನೀಡಿದರು.
ಜಲಜನಕ ಮಿಷನ್ನಲ್ಲಿ ಕೈಜೋಡಿಸಲು ಕರೆ: ಭಾರತದ ನ್ಯಾಷನಲ್ ಹೈಡ್ರೋಜನ್ ಮಿಷನ್ನ ಜತೆಗೆ ಕೈ ಜೋಡಿಸುವಂತೆ ಬ್ರಿಟನ್ಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು. ಎರಡೂ ದೇಶಗಳ ನಡುವೆ ಹವಾಮಾನ ವೈಪರೀತ್ಯ ತಡೆ, ಇಂಧನ ಪಾಲುದಾರಿಕೆ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಹೀಗಾಗಿ ಎರಡೂ ದೇಶಗಳು ವರ್ಚುವಲ್ ಹೈಡ್ರೋಜನ್ ಸೈನ್ಸ್ ಆಂಡ್ ಇನ್ನೋವೇಷನ್ ಹಬ್ ಸ್ಥಾಪನೆಗೆ ಚಾಲನೆ ನೀಡಲಿವೆ ಎಂದು ಬ್ರಿಟನ್ ಹೇಳಿದೆ.
ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿಯ ಭಾರತ ಭೇಟಿ ವಿಶೇಷ ಮತ್ತು ಐತಿಹಾಸಿಕ. | ನರೇಂದ್ರ ಮೋದಿ ಪ್ರಧಾನಿ
ದೀಪಾವಳಿ ವೇಳೆಗೆ ಎಫ್ಟಿಎ: ದೀಪಾವಳಿ ಹಬ್ಬಕ್ಕೆ ಮೊದಲು ಎರಡೂ ರಾಷ್ಟ್ರಗಳ ನಡುವೆ ಹೊಸ ಫ್ರೀ ಟ್ರೇಡ್ ಅಗ್ರಿಮೆಂಟ್ ರೂಪಿಸುವುದು ನಮ್ಮ ಉದ್ದೇಶ. ಸರಕು ಮತ್ತು ಸಾಧನಗಳ ಟಾರಿಫ್ ಅನ್ನು ಭಾರತ ಇಳಿಸಿದರೆ ಅಂತಹ ಕ್ರಮವನ್ನು ನಾವು ಶ್ಲಾಘಿಸುತ್ತೇವೆ. ನಾವು ಕೂಡ ಬೆಲೆ ಇಳಿಸಿ, ಸುಂಕವನ್ನೂ ಕಡಿಮೆ ಮಾಡುತ್ತೇವೆ. ಆರೋಗ್ಯ ಸೇವಾ ಕ್ಷೇತ್ರದಲ್ಲೂ ಇಂಥದ್ದೇ ಪಾಲುದಾರಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಜಾನ್ಸನ್ ಹೇಳಿದರು.
ಭಾರತಕ್ಕೆ ಅಪಚಾರವೆಸಗಲ್ಲ: ‘ಭಾರತದ ಕಾನೂನಿನಿಂದ ಬಚಾವಾಗುವುದಕ್ಕೆ ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸುವ ವ್ಯಕ್ತಿಗಳನ್ನು ನಾವು ಸ್ವಾಗತಿಸುವುದಿಲ್ಲ. ಈ ವಿಚಾರವಾಗಿ ಭಾರತಕ್ಕೆ ನೆರವು ನೀಡಲು ನಾವು ಬಯಸುತ್ತೇವೆಯೇ ಹೊರತು ಅಪಚಾರ ಮಾಡಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಗಳ ಕಾರಣ ವಿಳಂಬವಾಗಿದೆ’ ಎಂದು ಬೋರಿಸ್ ಜಾನ್ಸನ್ ಹೇಳಿದರು. ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಕೆಲವು ಖಲಿಸ್ತಾನಿ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಈ ರೀತಿ ಉತ್ತರಿಸಿದರು.
ಸೆಲೆಬ್ರಿಟಿಗೆ ಸಿಗುವಂತಹ ಸ್ವಾಗತ ಸಿಕ್ತು: ‘ಭಾರತಕ್ಕೆ ಆಗಮಿಸಿದ ನನಗೆ ಗುಜರಾತ್ನಲ್ಲಿ ಸಚಿನ್ ತೆಂಡುಲ್ಕರ್, ಅಮಿತಾಭ್ ಬಚ್ಚನ್ ಅವರಿಗೆ ಸಿಗುವಂತಹ ಸ್ವಾಗತ ಸಿಕ್ತು. ಅಷ್ಟೊಂದು ಹೋರ್ಡಿಂಗ್ಗಳನ್ನು ನೋಡಿದೆ. ಪ್ರಧಾನಿ ನರೇಂದ್ರ ಮೋದಿ ನನಗೆ ಖಾಸಾ ದೋಸ್ತ್ ಇದ್ದಂತೆ’ ಎಂದು ಬೋರಿಸ್ ಜಾನ್ಸನ್ ಹೇಳಿದರು.