

Finance minister | ಭಾರತವು ತನ್ನ ಹಣಕಾಸಿನ ಕೊರತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಿದ್ಧವಾಗಿದೆ. 2026 ರ ವೇಳೆಗೆ ಅದನ್ನು 4.5% ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ದೇಶದಲ್ಲಿ ಹಣಕಾಸಿನ ಕೊರತೆ ಹೆಚ್ಚಾಯಿತು. ಆದರೆ 2021 ರಲ್ಲಿ ನಮ್ಮ ಹಣಕಾಸಿನ ಕೊರತೆಯನ್ನು ಹೇಗೆ ನಿರ್ವಹಿಸಬೇಕೆಂದು ನಾವು ಸ್ಪಷ್ಟ ಸೂಚನೆಯನ್ನು ನೀಡಿದ್ದೇವೆ. ನಾವು ವರ್ಷದಿಂದ ವರ್ಷಕ್ಕೆ ಹೊಸ ಗುರಿಗಳನ್ನು ಹೊಂದಿದ್ದೇವೆ. 2026 ರ ವೇಳೆಗೆ ಹಣಕಾಸಿನ ಕೊರತೆಯನ್ನು 4.5% ಕ್ಕಿಂತ ಕಡಿಮೆಗೆ ತರಲು ನಾವು ಬದ್ಧರಾಗಿದ್ದೇವೆ. ಅದನ್ನೇ ನಾವು ಪ್ರತಿ ವರ್ಷವೂ ತಪ್ಪದೆ ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರದ ಪ್ರಾಥಮಿಕ ಗಮನ 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವುದಾಗಿದೆ. ಇದು ಮಹಿಳೆಯರು, ಬಡವರು, ಯುವಕರು ಮತ್ತು ರೈತರ ಮೇಲೆ ಪರಿಣಾಮ ಬೀರುವ ವಲಯಗಳಲ್ಲಿನ ಸುಧಾರಣೆಗಳನ್ನು ಒಳಗೊಂಡಿದೆ ಎಂದು ಸೀತಾರಾಮನ್ ಹೇಳಿದರು.
ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತವನ್ನು ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಶಕ್ತಿಯಾಗಿ ಗುರುತಿಸುತ್ತವೆ. ಇದು ದೇಶದ ಗಮನಾರ್ಹ ಆರ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
(ಏಜೆನ್ಸೀಸ್)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕ ಮತ್ತು ಪೆರುವಿಗೆ 11 ದಿನಗಳ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅವರು ಐಎಂಎಫ್-ವಿಶ್ವಬ್ಯಾಂಕ್ ಮತ್ತು ಜಿ-20 ರಾಷ್ಟ್ರಗಳ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 22, 23ರಂದು ವಾಷಿಂಗ್ಟನ್‌ನಲ್ಲಿ ಐಎಂಎಫ್, ವಿಶ್ವಬ್ಯಾಂಕ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ, ಅರ್ಜೆಂಟೀನಾ, ಬಹ್ಮನ್, ಜರ್ಮನಿ, ಫ್ರಾನ್ಸ್, ಲಕ್ಸೆಂಬರ್ಗ್, ಸೌದಿ, ಬ್ರಿಟನ್, ಅಮೆರಿಕ ಜತೆ ದ್ವಿಪಕ್ಷೀಯ ಚರ್ಚೆ ನಡೆಸುತ್ತಾರೆ. ಏ. 26ರಿಂದ 30ರವರೆಗೆ ಪೆರುವಿಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರಲ್ಲದೆ ಭಾರತ-ಪರು ವ್ಯಾಪಾರ ವೇದಿಕೆಯ ಸಭೆಯಲ್ಲಿಯೂ ಭಾಗವಹಿಸುತ್ತಾರೆ.