

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ದೂರದ ದೋಹಾ ಕತಾರ್ನಲ್ಲೂ ಆಚರಿಸಲಾಗಿದ್ದು, ಆ ಪ್ರಯುಕ್ತ ನೂರಾರು ಮಂದಿ ರಕ್ತದಾನವನ್ನೂ ಮಾಡಿದ್ದಾರೆ. ದೋಹಾ ಕತಾರ್ನ ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಅಶೋಕ ಹಾಲ್ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆದಿದೆ. ಐಸಿಸಿ ಜೊತೆ ಹಮಾದ್ ಮೆಡಿಕಲ್ ಕಾರ್ಪೊರೇಷನ್ ಈ ಶಿಬಿರಕ್ಕೆ ಸಹಯೋಗ ನೀಡಿತ್ತು.
ದೋಹಾ ಕತಾರ್ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಈ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ್ದಾರೆ. ಅವರೊಂದಿಗೆ ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಶೇಖ್ ಮೊಹಮದ್ ಬಿನ್ ಹಮಾದ್ ಅಲ್ ಥಾನಿ, ಮಿಸ್ಟರ್ ಕ್ಸೇವಿಯರ್ ಧನರಾಜ್ ಫಸ್ಟ್ ಸೆಕ್ರೆಟರಿ ಮುಂತಾದವರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಮಾದ್ ಬ್ಲಡ್ ಡಾನರ್ ಸೆಂಟರ್ನ ಡಾ.ಶರೊನ್ ಜಾಕೊಬ್, ನಸೀಮ್ ಮೆಡಿಕಲ್ನ ಇಕ್ಬಾಲ್ ಅಬ್ದುಲ್ ಅವರು ಇದಕ್ಕೆ ಪ್ರಾಯೋಜಕತ್ವ ವಹಿಸಿದ್ದರು. ನಲವತ್ತು ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಬೃಹತ್ ರಕ್ತದಾನ ಶಿಬಿರಕ್ಕೆ 780 ದಾನಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಆ ಪೈಕಿ 590 ದಾನಕ್ಕೆ ಮುಂದಾಗಿದ್ದು ತಪಾಸಣೆ ಬಳಿಕ 496 ಮಂದಿ ದಾನಕ್ಕೆ ಅರ್ಹರಾಗಿದ್ದು, ಅವರಿಂದ ರಕ್ತವನ್ನು ಸ್ವೀಕರಿಸಲಾಗಿದೆ. ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಉಪಾಧ್ಯಕ್ಷ ಸುಬ್ರಹ್ಯಣ್ಯ ಹೆಬ್ಬಾಗಿಲು ಮುಂತಾದವರು ಇದನ್ನು ನಿರ್ವಹಿಸಿದ್ದು, ಪಿ.ಎನ್. ಬಾಬುರಾಜನ್ ನೇತೃತ್ವ ವಹಿಸಿದ್ದರು.