ಮಹಿಳೆ ಜತೆ ಅಸಭ್ಯ ವರ್ತನೆ, ಎಸ್‌ಪಿಪಿ ಸೆರೆ

SPP
Published on

ಬೆಂಗಳೂರು: ಕೋರ್ಟ್ ಆದೇಶ ಪ್ರತಿ ಕೊಡಿಸುವುದಾಗಿ ಮಹಿಳೆಯನ್ನು ಲಾಡ್ಜ್‌ಗೆ ಕರೆದ ಆರೋಪದ ಮೇಲೆ ಪಬ್ಲಿಕ್ ಪ್ರಾಸಿಕ್ಯೂಟರ್‌ನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀರಾಮ್ ಬಂಧಿತರು. ಮೇ 9ರ ಮಧ್ಯಾಹ್ನ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಎ್ಐಆರ್ ದಾಖಲಿಸಿ ಶ್ರೀರಾಮ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನುನ್ನು ರದ್ದುಪಡಿಸಲು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಂತ್ರಸ್ತೆ ಮುಂದಾಗಿದ್ದರು. ಅದಕ್ಕಾಗಿ ದೃಢೀಕೃತ ಆದೇಶ ಪ್ರತಿ ಬೇಕೆಂದು ಎಸ್‌ಪಿಪಿ ಶ್ರೀರಾಮ್ ಕಚೇರಿಗೆ ಗುರುವಾರ ಹೋಗಿದ್ದರು.

ಮಧ್ಯಾಹ್ನ 2.33ಕ್ಕೆ ಕಚೇರಿಗೆ ಬಂದ ಶ್ರೀರಾಮ್, ‘ಈ ಕೇಸಿನಲ್ಲಿ ನಾನು ಏನು ಮಾಡಲು ಸಾಧ್ಯವಿಲ್ಲ. ನನಗೆ ಪರಿಚಯ ಇರುವ ವಕೀಲ ಚಂದನ್ ಎಂಬುವರನ್ನು ಪರಿಚಯ ಮಾಡಿಸಿಕೊಡುತ್ತೆನೆ. ಶುಲ್ಕದ ಬಗ್ಗೆ ಮಾತನೋಡಬೇಕಾಗಿದ್ದು, ಕೋರ್ಟ್ ಗೇಟ್ ಹತ್ತಿರ ಬರುವಂತೆ ಕೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಅಲ್ಲಿಗೆ ಬಂದ ಸಂತ್ರಸ್ತೆಯನ್ನು ಆಟೋದಲ್ಲಿ ಕೂರಿಸಿಕೊಂಡ ಶ್ರೀರಾಮ್, ಕಾಟನ್‌ಪೇಟೆ ರಸ್ತೆಯ ಲಾಡ್ಜ್ ಹತ್ತಿರ ನಿಲ್ಲಿಸಿದ್ದಾರೆ.

ಆನಂತರ ಲಾಡ್ಜ್ ಒಳಗೆ ಬಾ ಎಂದು ಸಂತ್ರಸ್ತೆಯನ್ನು ಶ್ರೀರಾಮ್ ಒತ್ತಾಯ ಮಾಡಿದ್ದಾರೆ. ಬರುವುದಿಲ್ಲ ಎಂದಾಗ ಸಂತ್ರಸ್ತೆಯ ಕೈ ಹಿಡಿದು ಎಳೆದಾಡಿ ‘ನಿನ್ನ ಪ್ರಕರಣವನ್ನು ಮುಗಿಸಿ ಕೊಡುತ್ತೆನೆ. 10 ನಿಮಿಷ ಒಳಗೆ ಬಾ’ ಎಂದು ಬಲವಂತ ಮಾಡಿದ್ದಾರೆ. ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಮುಂದೆ ಹೋಗಿ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲಿಗೂ ಬಂದ ಶ್ರೀರಾಮ್, ಬಲವಂತವಾಗಿ ಕೈಹಿಡಿದು ಎಳೆದಾಡಿ ಬೇರೆ ಹೋಟೆಲ್ ಬೇಕಾದರೆ ಮಾಡುತ್ತೆನೆ ಎಂದು ರಂಪಾಟ ನಡೆಸಿದ್ದರು. ಅಷ್ಟೊತ್ತಿಗೆ ಸಂತ್ರಸ್ತೆಯ ಗಂಡನ ಸ್ನೇಹಿತ ಸಹಾಯಕ್ಕೆ ಬಂದಾಗ ಎಸ್‌ಪಿಪಿ ಮತ್ತೆ ಕೈ ಹಿಡಿದು ಹಿಂಸೆ ಕೊಡುತ್ತಿದ್ದ. ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದಾಗ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರ ಸಹಾಯದಿಂದ ಶ್ರೀರಾಮ್‌ನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net