ಮೊಬೈಲ್​ನಲ್ಲಿ ಮಾತನಾಡ್ತಿದ್ದ ಮಹಿಳೆಗೆ ಮುತ್ತಿಟ್ಟ ಯುವಕನಿಗಾಗಿ ಪೊಲೀಸರ ಶೋಧ: ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ

Woman Accused
Published on

ಪಟನಾ: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಮಹಿಳೆಯೊಬ್ಬಳು ಮೊಬೈಲ್​ ಮಾತನಾಡುತ್ತಾ ನಿಂತಿರುವಾಗ ಹಿಂದಿನಿಂದ ಬರುವ ಯುವಕನೊಬ್ಬ ಮಹಿಳೆಯನ್ನು ಹಿಡಿದುಕೊಂಡು ಬಲವಂತವಾಗಿ ತುಟಿ ಚುಂಬಿಸುವ ದೃಶ್ಯ ವಿಡಿಯೋದಲ್ಲಿದೆ. ಯುವಕ ವರ್ತನೆಗೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ಪ್ರಕರಣದ ತಾಜಾ ಬೆಳವಣಿಗೆ ಏನೆಂದರೆ, ಮಹಿಳೆಗೆ ಕಿರುಕುಳ ನೀಡಿದ ಯುವಕನ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ ಈ ಘಟನೆ ಬಿಹಾರದ ಜಮುಯಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದೇ ತಿಂಗಳ ಮಾರ್ಚ್​ 10ರಂದು ಈ ಘಟನೆ ನಡೆದಿದೆ. ಮಹಿಳೆಯು ಆರೋಗ್ಯ ಕಾರ್ಯಕರ್ತೆಯಾಗಿದ್ದು, ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಹಿಂಬದಿಯಿಂದ ಬಂದ ಯುವಕ ಹಿಡಿದೆಳೆದು ತಬ್ಬಿಕೊಂದು ಬಲವಂತವಾಗಿ ತುಟಿಗೆ ಚುಂಬಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ಬೆನ್ನಲ್ಲೇ ಸಂತ್ರಸ್ತೆ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ ಆತ ಯಾರು ಎಂಬುದು ನನಗೆ ತಿಳಿದಿಲ್ಲ. ಆತ ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಆಸ್ಪತ್ರೆಯ ಕಾಪೌಂಡ್​ ಗೋಡೆ ಜಿಗಿದು ಬಂದು ಈ ಕೃತ್ಯ ಎಸಗಿದ್ದಾನೆ. ನನ್ನ ಜೊತೆ ಅನುಚಿತವಾಗಿ ವರ್ತಿಸಿದಾಗ ತಕ್ಷಣ ನಾನು ತಡೆದೆ. ನಾನು ಆಸ್ಪತ್ರೆಯ ಸಿಬ್ಬಂದಿಯನ್ನು ಕೂಗಿಕೊಂಡಾಗ ಆತ ಅಲ್ಲಿಂದ ಕಾಲ್ಕಿತ್ತ ಎಂದು ಹೇಳಿದ್ದಾರೆ.

ಆತನನ್ನು ಬಂಧಿಸಿ, ಕಠಿಣ ಕ್ರಮವನ್ನು ಜರುಗಿಸಬೇಕು. ಆಸ್ಪತ್ರೆಯ ಕಾಪೌಂಡ್​ ಗೋಡೆ ತುಂಬಾ ಚಿಕ್ಕದಾಗಿದೆ. ಗೋಡೆಯ ಮೇಲೆ ತಂತಿ ಬೇಲಿಯನ್ನು ಅಳವಡಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಯ ಬಳಿ ಮನವಿ ಮಾಡಿದ್ದೇನೆ ಎಂದು ಸಂತ್ರಸ್ತೆ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಇದೀಗ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಲು ಪ್ರುಯತ್ನ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net