

ಮುಜಾಫರ್ನಗರ: ದುಬಾರಿ ವರದಕ್ಷಿಣೆ ಕೇಳಿದ ವರನಿಗೆ ವಧು, ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ಸೇರಿಕೊಂಡು ಬುದ್ಧಿ ಕಲಿಸಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ವರ ವಾಸಿಂ ಅಹ್ಮದ್ ಎಂಬಾತ ವರದಕ್ಷಿಣೆಯಾಗಿ ಟ್ರ್ಯಾಕ್ಟರ್ ನೀಡುವಂತೆ ವಧುವಿನ ಕುಟುಂಬವನ್ನು ಕೇಳಿದ್ದ. ಬಳಿಕ ಈ ವಾರದ ಆರಂಭದಲ್ಲಿ ತಮ್ಮ ಸಂಬಂಧಿಕರೊಂದಿಗೆ ಮದುವೆ ಮಂಟಪ್ಪಕ್ಕೆ ಬಂದಿದ್ದ. ಆತನನ್ನ ಮತ್ತು ಅವರ ಕುಟುಂಬವನ್ನು ಸ್ಥಳೀಯ ಜನರು ಒತ್ತೆಯಾಳಾಗಿರಿಸಿಕೊಂಡರು.
ಇದಾದ ಬಳಿಕ ಒಂದು ಹೊಸ ಟ್ರ್ಯಾಕ್ಟರ್ಗೆ ವ್ಯವಸ್ಥೆ ಮಾಡಿ, ವಧುವಿನ ಬದಲಾಗಿ ಆ ಟ್ರ್ಯಾಕ್ಟರ್ ಅನ್ನೇ ಮದುವೆ ಆಗುವಂತೆ ಸ್ಥಳೀಯರು ಒತ್ತಾಯ ಮಾಡಿದರು. ಮದುವೆಯ ಸಕಲ ವ್ಯವಸ್ಥೆಗೆ ವಧುವಿನ ಮನೆಯವರು ಮಾಡಿದ್ದ ಖರ್ಚನ್ನು ಕೊಡಲು ಒಪ್ಪಿಕೊಂಡ ಬಳಿ ವರ ಮತ್ತು ಅವನ ಜೊತೆಗಿದ್ದ ಸಂಬಂಧಿಕರನ್ನು ಹಲವಾರು ಗಂಟೆಗಳ ನಂತರ ಬಿಟ್ಟು ಕಳುಹಿಸಲಾಯಿತು.
ವಧುವಿನ ಚಿಕ್ಕಪ್ಪ ಮೊಹಮ್ಮದ್ ಮಾತನಾಡಿ, ನನ್ನ ಸಹೋದರ ತನ್ನ ಮಗಳಿಗಾಗಿ ಪೀಠೋಪಕರಣ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಲಕ್ಷಗಟ್ಟಲೆ ಖರ್ಚು ಮಾಡಿದ್ದಾನೆ. ನಾಲ್ಕು ದಿನಗಳ ಹಿಂದೆ ವರನ ಮನೆಗೆ ಎಲ್ಲವನ್ನೂ ತಲುಪಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)