

ಮುಂಬೈ: ಇಂದು ಭಾರತ ಮತ್ತು ನ್ಯೂಜಿಲೆಂಡ್ (IND vs NZ) ವಿರುದ್ಧದ ಎರಡನೇ ಪಂದ್ಯವು ಪುಣೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೀಡಾ ಅಭಿಮಾನಿಗಳು ಆಡಳಿತ ಮಂಡಳಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಫ್ಯಾನ್ಸ್, ಸ್ಟೇಡಿಯಂ ಹೊರಬಂದು ಪ್ರತಿಭಟನೆ (Protest) ನಡೆಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಷ್ಟು ಉತ್ತಮ ಸ್ಥಾನ ಪಡೆದಿರುವ ಬಿಸಿಸಿಐ ಅಂತಾರಾಷ್ಟ್ರೀಯ ಪಂದ್ಯವನ್ನು ನೋಡಲು ಆಗಮಿಸಿರುವ ಸಹಸ್ರಾರು ಸಂಖ್ಯೆಯ ಅಭಿಮಾನಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಯಾಕಿಷ್ಟು ವಿಫಲವಾಗಿದೆ. ಇಲ್ಲಿನ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸುವ ಜವಾಬ್ದಾರಿಯನ್ನು ಹೊರುವಲ್ಲಿ ಏಕೆ ಆಡಳಿತ ಮಂಡಳಿ ಹಿಂದೇಟು ಹಾಕಿದೆ ಎಂದು ಕ್ರಿಕೆಟ್ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಕುಡಿಯಲು ನೀರು ಒದಗಿಸುವುದು ಮೂಲ ಸೌಕರ್ಯದ ಗುರುತು. ಹೀಗಿರುವಾಗ ಅಪಾರ ಸಂಖ್ಯೆಯಲ್ಲಿ ಪಂದ್ಯ ನೋಡಲು ಹಣ ಕೊಟ್ಟು ಬಂದಿರುವ ಅಭಿಮಾನಿಗಳಿಗೆ ಇದೇನಾ ನೀವು ಕೊಡುವ ವ್ಯವಸ್ಥೆ. ಇಂತಹ ಬೇಜವಾಬ್ದಾರಿ ಕೆಲಸಕ್ಕೆ ನಮ್ಮ ವಿರೋಧ, ಖಂಡನೆ ಇದ್ದೇ ಇರುತ್ತದೆ ಎಂದು ಪಂದ್ಯ ನೋಡಲು ಬಂದಿದ್ದ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರು ತಮಗೆ ನೀರು ಪೂರೈಕೆ ಮಾಡಲಿಲ್ಲ ಎಂದು ಸಿಟ್ಟಿಗೆದ್ದ ವೀಕ್ಷಕರು, ಸ್ಟೇಡಿಯಂನಿಂದ ಹೊರಬಂದು ಕುಡಿಯುವ ನೀರು ಪೂರೈಕೆ ಮಾಡುವವರೆಗೂ ಪಂದ್ಯ ನೋಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಥಳೀಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅಭಿಮಾನಿಗಳಿಗೆ ನೀರಿನ ಬಾಟಲಿಗಳನ್ನು ಒದಗಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಡೆವೊನ್ ಕಾನ್ವೆ ಆಕರ್ಷಕ ಅರ್ಧ ಶತಕ ಗಳಿಸಿ ಔಟ್ ಆಗಿದ್ದಾರೆ. ಇನ್ನು ಭಾರತದ ಪರ ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ,(ಏಜೆನ್ಸೀಸ್).