

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಹಿಂಸೆಯನ್ನು ಉತ್ತೇಜಿಸುವ ವಿಡಿಯೋ ಗೇಮ್ಗಳಲ್ಲಿ ತೊಡಗುವಿಕೆ ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳಲ್ಲಿ ಅದೂ ಹದಿಹರೆಯದವರಲ್ಲಿ ಕ್ರೌರ್ಯ ಹೆಚ್ಚುತ್ತಿರುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಸಣ್ಣ ಸಣ್ಣ ಕಾರಣಕ್ಕೆ ಗಲಾಟೆ, ಹೊಡೆದಾಟ, ಹಲ್ಲೆಯಂಥ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು, ಚಿಂತೆಗೆ ಕಾರಣವಾಗಿದೆ.
ವಿದ್ಯಾರ್ಥಿಗಳಿಗೆ ನೈತಿಕತೆಯನ್ನು ಕಲಿಸಿ, ಉತ್ತಮ ವ್ಯಕ್ತಿತ್ವ ರೂಪಿಸಬೇಕಾದ ಶೈಕ್ಷಣಿಕ ಸಂಸ್ಥೆಗಳೇ ಅಪರಾಧ ಕೇಂದ್ರಗಳಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಮಕ್ಕಳ ಶೈಕ್ಷಣಿಕ ಬದುಕು ಉಜ್ವಲಗೊಳ್ಳಲಿ ಎಂದು ಬಯಸಿ ಪಾಲಕರು ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿಸುತ್ತಾರೆ. ಆದರೆ, ಭದ್ರತೆಯ ವಾತಾವರಣವೇ ಇಲ್ಲದ ಇಂಥ ಪ್ರದೇಶದಲ್ಲಿ ಮಕ್ಕಳು ಆತಂಕದಲ್ಲೇ ದಿನದೂಡುವಂತಾಗಿದೆ. ಅಲ್ಲದೆ, ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ತೊಡಗುವ ವಿದ್ಯಾರ್ಥಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶೈಕ್ಷಣಿಕ ಸಂಸ್ಥೆಗಳು ಹಿಂದೇಟು ಹಾಕುತ್ತಿರುವ ಪರಿಣಾಮ ಅಹಿತಕರ ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಗುಜರಾತ್ನ ಅಹಮದಾಬಾದ್ನಲ್ಲಿ ಬುಧವಾರ ಕಿರಿಯ ವಿದ್ಯಾರ್ಥಿಯೊಬ್ಬ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅಲ್ಲದೆ, ಈ ಘಟನೆಯ ಬಗ್ಗೆ ಆರೋಪಿ ವಿದ್ಯಾರ್ಥಿಯು ಸ್ನೇಹಿತನೊಂದಿಗೆ ವಾಟ್ಸ್ಆಪ್ ಚಾಟ್ನಲ್ಲಿ ‘ಆಗಿದ್ದು ಆಗಿಹೋಯಿತು’ ಎಂದು ಹೇಳಿದ್ದು, ಆತನಲ್ಲಿ ಪಶ್ಚಾತಾಪದ ಲವಲೇಶವೂ ಇಲ್ಲದಿರುವುದು ಎಳೆ ಮನಸ್ಸುಗಳಲ್ಲಿ ತುಂಬಿರುವ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಯ ಹತ್ಯೆಯನ್ನು ಖಂಡಿಸಿ ಅಹಮದಾಬಾದ್ನ 200ಕ್ಕೂ ಹೆಚ್ಚು ಶಾಲೆಗಳು ಗುರುವಾದ ಬಂದ್ ಆಚರಿಸಿದವು. ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಘಟನೆಗೆ ಶಾಲೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನ, ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿವೆ.
ಸ್ನೇಹಿತರ ನಡುವೆ ವಾದ-ವಿವಾದ, ಸಣ್ಣ ಮಟ್ಟಿನ ಮನಸ್ತಾಪ ಸಹಜವೇ. ಆದರೆ, ಅದು ಜೀವವನ್ನೇ ಬಲಿ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಗುತ್ತಿರುವುದು, ಹದಿಹರೆಯದವರಿಗೆ ಜೀವ, ಜೀವನದ ಮೌಲ್ಯವೇ ಗೊತ್ತಾಗದಿರುವುದು ನಿಜಕ್ಕೂ ದುರಂತ. ವಿಡಿಯೋ ಗೇಮ್ಳಲ್ಲಿ ಅಥವಾ ಟಿವಿ, ಇಂಟರ್ನೆಟ್ನಲ್ಲಿ ವೀಕ್ಷಿಸುವ ಕಂಟೆಂಟ್ಗಳಲ್ಲಿ ಹಿಂಸೆಯೇ ಪ್ರಧಾನವಸ್ತು ಆಗಿರುತ್ತದೆ. ಹಾಗಾಗಿ, ಈ ಮನೋಭಾವವೇ ವೇಗವಾಗಿ ಆವರಿಸಿಕೊಳ್ಳುತ್ತಿದ್ದು, ಅದೇ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತಿದೆ. ಶಾಲೆಗಳಲ್ಲಿ ಮಾತ್ರವಲ್ಲ ಮನೆಗಳಲ್ಲೂ ಮಕ್ಕಳು ಹೀಗೆ ಹಿಂಸೆಯ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಸಣ್ಣ ಘಟನೆಗೂ ವ್ಯಗ್ರರಾಗಿ ವಿಕಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಪ್ರತಿಷ್ಠಿತ ಶಾಲೆ-ಕಾಲೇಜುಗಳಲ್ಲೂ ಹಲ್ಲೆ, ನಿಂದನೆ, ಕಳ್ಳತನ, ರ್ಯಾಗಿಂಗ್ನಂಥ ಪ್ರಕರಣಗಳು ಪದೇಪದೆ ಸಂಭವಿಸುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಪಠ್ಯ ಶಿಕ್ಷಣವಷ್ಟೇ ಸಾಕಾಗದು. ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಒದಗಿಸಬೇಕು. ಇತ್ತೀಚಿನ ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಮನಸ್ಸನ್ನು ಅರಳಿಸುವ ಶಿಕ್ಷಣಕ್ಕೆ ಒತ್ತು ನೀಡದೆ, ಪಠ್ಯಶಿಕ್ಷಣವನ್ನೂ ಒತ್ತಡದ ರೂಪದಲ್ಲಿ ಕಲಿಸುತ್ತಿವೆ. ಇದು ಮಾರಕ ಬೆಳವಣಿಗೆ. ಇತರರಿಗೆ ಹಿಂಸೆ ಮಾಡದೆ ಬದುಕಬೇಕು ಎಂಬ ಜೀವನಧರ್ಮ ಈ ನೆಲದ್ದು. ಆದರೆ, ಹದಿಹರೆಯದ ವಯಸ್ಸಿನವರು ಹಿಂಸೆಯನ್ನೇ ನೋಡುತ್ತ, ಅದರ ಬಗ್ಗೆ ಯೋಚಿಸುತ್ತ, ಅಂಥ ಕೃತ್ಯಗಳನ್ನೇ ಮಾಡುತ್ತಿರುವುದು ಅವರ ಜೀವನಕ್ಕೆ ಮಾತ್ರವಲ್ಲ ಸಮಾಜದ ಭವಿಷ್ಯಕ್ಕೂ ಘಾತಕ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಶೈಕ್ಷಣಿಕ ಸಂಸ್ಥೆಗಳಲ್ಲೂ, ಮನೆಗಳಲ್ಲೂ ನಡೆಯಬೇಕು.