ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ: ಗೃಹ ಸಚಿವ ಪರಮೇಶ್ವರ|Increased security

ggp1
Published on

ಬೆಂಗಳೂರು: ರಾಜ್ಯದ ಸೂಕ್ಷ್ಮ‌ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ(Increased security in sensitive areas) ಗಳನ್ನು ನಿಯೋಜಿಸುವ ಮೂಲಕ ಸುರಕ್ಷತೆ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ(G.Parameshwara)ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ, ಯುದ್ಧ ಭೀತಿ ಇದೆ. ಗಡಿ ಪ್ರದೇಶದಲ್ಲಿ ಆಗುತ್ತಿರುವ ಚಟುವಟಿಕೆಗಳು, ಉಗ್ರರ ವಿರುದ್ಧ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಈ ಪರಿಸ್ಥಿತಿ ಹೆಚ್ಚಾದರೆ ಯುದ್ದದ ಪರಿಸ್ಥಿತಿ ಬರಬಹುದು ಎಂಬುದನ್ನು ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯ ಸರ್ಕಾರಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು‌.

ರಾಜ್ಯದಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸುರಕ್ಷಿತೆ ಕೈಗೊಂಡಿದ್ದೇವೆ. ಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತಿ ವಹಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಈ ಕುರಿತಂತೆ ಮುಖ್ಯಮಂತ್ರಿಯವರು ಇಂದು ಸಂಜೆ ೪ ಗಂಟೆಗೆ ಸಭೆ ಕರೆದಿದ್ದಾರೆ. ಅಂತಹ ಸನ್ನಿವೇಶ ಬಂದರೆ ನೀರು, ಆಹಾರ ಧಾನ್ಯ , ಆಸ್ಪತ್ರೆ ಸೇರಿ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತೇವೆ.‌ ನಿನ್ನೆಯಿಂದ ಈಚೆಗೆ ಕೇಂದ್ರ ಸರ್ಕಾರದಿಂದ ಯಾವುದಾದರೂ ಸೂಚನೆಗಳು ಬಂದಿದ್ದರೆ, ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ನಾಗರಿಕರಿಗೆ ಕೆಲವು ಮಾರ್ಗಸೂಚಿಗಳನ್ನು ಕೊಟ್ಟಿದ್ದಾರೆ. ನಾವು ಅಂತಹ ಸನ್ನಿವೇಶದಲ್ಲಿದ್ದೇವೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,

ಸನ್ನಿವೇಶ ಎದುರಾಗುವ ಮುನ್ನ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ಆಹಾರ ಧಾನ್ಯ, ನೀರು, ಆಸ್ಪತ್ರೆ ತಯಾರಿ ಮಾಡಿಕೊಂಡಿದ್ದೇವೆ. ಅಂತಹ ಘಟನೆಗಳು ನಡೆದರೆ ಎದುರಿಸಲು ನಾವು ಸಿದ್ಧವಾಗಿರಬೇಕು ಎಂಬುದನ್ನು ಹೊರತುಪಡಿಸಿದರೆ, ಅಂತಹ ಸನ್ನಿವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರಿಗೆ ರಜೆ ಕೊಡುವುದಿಲ್ಲ. ಸೂಕ್ಷ್ಮ‌ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸುತ್ತದೆ. ಅಲ್ಲಿಯವರೆಗೂ ನಾವು ಸೂಕ್ಷ್ಮವಾಗಿರಬೇಕು‌ ಎಂದರು.

ಕರಾವಳಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕರಾವಳಿಯಲ್ಲಿ ಬಿಗಿ ಭದ್ರತೆ ‌ವಹಿಸಿದ್ದೇವೆ. ಮಂಗಳೂರು, ಉತ್ತರ ಕನ್ನಡದಲ್ಲಿ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆ ಎಲ್ಲಾ ಕ್ರಮ ವಹಿಸಿದೆ. ನೇವಿ ಅವರು ಕೂಡ ಭದ್ರತೆ ವಹಿಸಿದ್ದಾರೆ. ನಮ್ಮ ಬಾರ್ಡರ್ ಒಳಗೆ ಸೆಕ್ಯೂರಿಟಿ ಇದೆ. ಆ ಮಾಹಿತಿ ನಮಗೆ ಬಂದಿಲ್ಲ. ಕೇಂದ್ರದವರು ಏನಾದರೂ ಇದ್ದರೆ ಹೇಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net