

ಬೆಂಗಳೂರು: ಕೃಷಿಯಲ್ಲಿ ಪರಾಗಸ್ಪರ್ಶ ಕ್ರಮವನ್ನು ಅಳವಡಿಸಿಕೊಂಡಲ್ಲಿ ಆಹಾರ ಉತ್ಪಾದನೆಯಲ್ಲಿ ಶೇ.40 ಹೆಚ್ಚಳ ನಿರೀಕ್ಷಿಸಬಹುದಾಗಿದೆ ಎಂದು ಬೆಂಗಳೂರು ಕೃಷಿ ವಿವಿ (ಯುಎಎಸ್-ಬಿ) ಕುಲಪತಿ ಡಾ. ಎಸ್.ವಿ.ಸುರೇಶ ತಿಳಿಸಿದರು.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ವಿಭಾಗ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇವಲ ಕೃಷಿಯಿಂದ ಮಾತ್ರ ರೈತರು ಆರ್ಥಿಕವಾಗಿ ಸಬಲೀಕರಣವಾಗಲು ಸಾಧ್ಯವಿಲ್ಲ. ಪೂರಕ ಚಟುವಟಿಕೆಗಳಾದ ಜೇನು ಕೃಷಿಯಂತಹ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ವಿ ಸಾಧಿಸಲು ಸಾಧ್ಯ. ಜೇನು ಕೃಷಿಯನ್ನು ಒಂದು ಉದ್ಯಮದ ರೀತಿ ಸ್ವೀಕರಿಸಿ, ಗುಣಮಟ್ಟಕ್ಕೆ ಒತ್ತು ನೀಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದರು.
ಜೈವಿಕ ವೈವಿಧ್ಯತೆಗೆ ಮೂಲ ಕಾರಣ ಜೇನು. ಸುಮಾರು 80 ಜಾತಿಯ ಮರಗಳ ಪರಾಗಸ್ವರ್ಶಕ್ಕೆ ಜೇನು ನೊಣಗಳು ಅವಶ್ಯಕವಾಗಿವೆ. ಇತ್ತೀಚಿನ ದಿನಗಳಲ್ಲಿ ಜೇನು ಸಾಕಣೆ ನಶಿಸುತ್ತಿದ್ದು, ರಾಸಾಯನಿಕಗಳ ಬಳಕೆ ಪ್ರಮುಖ ಕಾರಣವಾಗಿದೆ. ಆದುದರಿಂದ ಅಗತ್ಯವಾದಾಗ ಮಾತ್ರ ರಾಸಾಯನಿಕಗಳ ಬಳಕೆ ಮಾಡಿ ಸುಸ್ಥಿರ ಕೃಷಿ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜೇನುನೊಣಗಳ ಸಂಖ್ಯೆ ಕ್ಷೀಣ:
ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ನಿರ್ದೇಶಕ ಡಾ. ಸುಶೀಲ್ ಮಾತನಾಡಿ, ಪ್ರಪಂಚದ ಮೂರನೇ ಒಂದು ಭಾಗದಷ್ಟು ಆಹಾರ ಉತ್ಪಾದನೆಗೆ ಜೇನು ನೋಣಗಳು ಸಹಕಾರಿಯಾಗಿದ್ದು ಪ್ರತಿಶತ ಶೇ.73 ಜೇನುನೊಣಗಳ ನೇರವಾಗಿ ಪರಾಗಸ್ಪರ್ಶಕ್ಕೆ ಕಾರಣವಾಗಿವೆ. ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಸಂಶೋಧನೆ ಕೈಗೊಳ್ಳಲು ಅತ್ಯಗತ್ಯವಾಗಿದೆ. ವಿದೇಶಗಳಲ್ಲಿ ಜೇನು ನೊಣಗಳಿಗೆ ಮಾರಕವಾಗಿರುವ ಪೀಡೆನಾಶಕಗಳನ್ನು ನಿಷೇಧಿಸಲಾಗಿದೆ, ಆದರೆ ಭಾರತದಲ್ಲಿ ನ್ಯಾನೋ ನಿಕೋಟಿನ್ ಅಂಶವಿರುವ ಪೀಡೆನಾಶಕಗಳ ನಿಷೇಧಿಸದಿರುವುದು ಅಚ್ಚರಿಯ ಅಂಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.