ಹುಲಿ ಸಂಚಾರದಿಂದ ಹೆಚ್ಚಿದ ಆತಂಕ

ಹುಲಿಯ ಹೆಜ್ಜೆ ಗುರುತು.
ಹುಲಿಯ ಹೆಜ್ಜೆ ಗುರುತು.
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 7ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ ಕಂಬಿಬಾಣೆ ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆ ಹಾವಳಿಯಲ್ಲದೆ ಹುಲಿ ಸಂಚಾರವೂ ಅತಂಕ ಹೆಚ್ಚಿಸಿದೆ. ಇದರಿಂದ ತೋಟದ ಮಾಲೀಕರು, ಕಾರ್ಮಿಕರು ತೋಟಗಳಲ್ಲಿ ಕುಲಿ ಕೆಲಸ ನಿರ್ವಹಿಸಲು ಪ್ರಾಣ ಭಯ ಎದುರಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಈಗಾಗಲೇ ಈ ವ್ಯಾಪ್ತಿಯಲ್ಲಿ ದಿನನಿತ್ಯ ಆನೆಗಳ ಹಾವಳಿ ಹೆಚ್ಚಿದ್ದು, ಕೆಲವೆಡೆ ಅನಾಹುತಗಳು ಸಂಭವಿಸುದು ಸಾಮಾನ್ಯವಾಗಿದೆ. ಇದರೊಂದಿಗೆ ಈಗ ಹುಲಿ ಸಂಚಾರದ ಹೆಜ್ಜೆ ಗುರುತು ಪತ್ತೆಯಾಗಿದ್ದು, ರೈತರು, ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿದೆ. ಕೊಡಗರಹಳ್ಳಿ ಕೆದಕಲ್, ಹೊರೂರು, ಮೊದ್ದೂರು ಕಂಬಿಬಾಣೆ, ಚಿಕ್ಲಿಹೊಳೆ, 7ನೇ ಹೊಸಕೋಟೆ ಭಾಗಗಳಲ್ಲಿ ಶಾಲೆಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆಗೆ ಹೋಗಿ ಬರುವಂತಾಗಿದೆ.

ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಓಡಿಸುವುದನ್ನು ಬಿಟ್ಟರೆ ಬೇರೆ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಈ ವ್ಯಾಪ್ತಿಯಲ್ಲಿ ಹೆಚ್ಚೆಂದರೆ 10 ರಿಂದ 15 ಕಾಡಾನೆಗಳು ಜನಜೀವನಕ್ಕೆ ಕಂಟಕವಾಗಿದ್ದು, ಅವುಗಳನ್ನು ಸೆರೆ ಹಿಡಿದು ಪಳಗಿಸಬೇಕಾಗಿದೆ. ಸರ್ಕಾರ ಇಲಾಖೆ ಮೂಲಕ ಪರಿಹಾರ ಮತ್ತು ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ ಮಾತ್ರಕ್ಕೆ ಆನೆ-ಮಾನವ ಸಂಘರ್ಷ ಮುಗಿಯುವುದಿಲ್ಲ. ಏಕಕಾಲಕ್ಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟವೆಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಂತ ಹಂತವಾಗಿಯಾದರೂ ದೀರ್ಘಕಾಲಿನ ಪರಿಹಾರ ಕ್ರಮಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಇದೇ ರೀತಿಯಲ್ಲಿ ಹುಲಿ ದಾಳಿ ಮಾಡಿದ ನಂತರ ಅಥವಾ ಸಾವು-ನೋವು ಸಂಭವಿಸಿದ ಮೇಲೆ ಹುಲಿ ಹಿಡಿಯುವ ಕಾರ್ಯಕ್ರಮಗಳಿಂದ ಪ್ರಯೋಜನವಾಗುವುದಿಲ್ಲ. ಬದಲಾಗಿ ಹುಲಿ ಸಂಚಾರದ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಮುಂದೊದಗುವ ಅನಾಹುತ ತಡೆಗಟ್ಟುವ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ತ್ವರಿತ ಗತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಂಸದರು, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಇಲಾಖೆಯ ನೊಡಲ್ ಅಧಿಕಾರಿ ಸೇರಿದಂತೆ ಸಂಬಂಧಿಸಿದವರು ವನ್ಯಪ್ರಾಣಿ-ಮಾನವ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಿದೆ.

ಕೆದಕಲ್ ಹೊರೂರು ಭಾಗ ಸೇರಿದಂತೆ ಚಿಕ್ಲಿಹೊಳೆ ಮತ್ತು ಆನೆಕಾಡು ವ್ಯಾಪ್ತಿಯಲ್ಲಿ ಹುಲಿ ಸಂಚರದ ಬಗ್ಗೆ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೊದ್ದೂರು, ಹೊರೂರು ವ್ಯಾಪ್ತಿಯಲ್ಲಿ ಪರಿಶೀಲನೆ ವೇಳೆ ಹುಲಿ ಹೆಜ್ಜೆ ಕಂಡು ಬಂದಿದೆ. ಇದು ಹುಲಿ ಹೆಜ್ಜೆಯೇ ಆಗಿದ್ದು , ಹೊರೂರು ಭಾಗದಿಂದ ಮಡಿಕೇರಿ ಕಡೆ ಸಂಚಾರ ಮಾಡಿರಬಹುದು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.

  • ದೇವಯ್ಯ, ಉಪ ಅರಣ್ಯ ವಲಯಾಧಿಕಾರಿ

ಈಗಾಗಲೇ ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದೇವೆ. ಇದೀಗ ಕಳೆದ 2 ದಿನಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹುಲಿ ಸಂಚಾರದ ಬಗ್ಗೆ ಸುದ್ದಿ ಕೇಳಿ ಬಂದಿದ್ದು, ದಾರಿ ತೋಚದಂತಾಗಿದೆ. ಹವಾಮಾನ ವೈಪರೀತ್ಯ, ಆಕಾಲಿಕ ಮಳೆಯಿಂದಾಗಿ ವರ್ಷಕ್ಕೊಮ್ಮೆ ಬರುವ ಫಸಲನ್ನು ನಂಬಿ ಬದುಕುವ ನಾವು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

  • ಮುಕ್ಕಾಟಿರ ಸಂಜಪೊನ್ನಪ್ಪ, ಗ್ರಾಪಂ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net