

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಕುಂಠಿತವಾಗುತ್ತಿದೆ. ಶುದ್ಧ ಗಾಳಿಯೇ ಇಲ್ಲದಂತಹ ಪರಿಸ್ಥಿತಿ ದೆಹಲಿಯಾದ್ಯಂತ ನಿರ್ಮಾಣವಾಗಿದೆ. ಡಿಸೆಂಬರ್ ವೇಳೆಗೆ ದೆಹಲಿಯಲ್ಲಿ ವಿಷ ಗಾಳಿಯ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯ ವಾಯು ಮಾಲಿನ್ಯದ ಆತಂಕದಿಂದಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಮುಚ್ಚಲು ಒತ್ತಾಯಿಸಲಾಗುತ್ತಿದೆ.
ಕೈಗಾರಿಕೆಗಳಿಂದ ಹೊರಬರುವ ವಿಷಗಾಳಿಯೂ ದೆಹಲಿ ವಾತಾವರಣ ಹದಗೆಡಲು ಕಾರಣವಾಗಿದೆ. ಇದರೊಂದಿಗೆ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶಗಳಲ್ಲಿನ ರೈತರು ಈ ಅವಧಿಯಲ್ಲಿ ತಮ್ಮ ಹೊಲದಲ್ಲಿರುವ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುತ್ತಾರೆ. ಇದರಿಂದ ಹೊರ ಬರುವ ಹೊಗೆ ದೆಹಲಿಯನ್ನು ಸೇರಿಕೊಳ್ಳುತ್ತಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಸೆಪ್ಟೆಂಬರ್ ತಿಂಗಳಿನ ನಂತರ ಉತ್ತರ ಭಾರತದ ಭಾಗದಲ್ಲಿ ಅತಿಯಾದ ಮಾಯುಮಾಲಿನ್ಯ ದಾಖಲಾಗುತ್ತಿದೆ. ಇದಕ್ಕೆ ರೈತರು ತಮ್ಮ ಜಮೀನಿನಲ್ಲಿ ಕಳೆನಾಶಕಕ್ಕೆ ಸುಡುವ ಬೆಂಕಿಯೂ ಕಾರಣವಾಗಿದೆ. ಹೀಗಾಗಿ ಹೊಲಗಳಲ್ಲಿ ಬೆಂಕಿ ಸುಡುವುದಕ್ಕೆ ಸರ್ಕಾರ ನಿಷೇಧ ಹೇರಿದ್ದರೂ, ರೈತರು ಮಾತ್ರ ಕೃಷಿ ತ್ಯಾಜ್ಯಗಳನ್ನು ಸುಡುತ್ತಿದ್ದಾರೆ.
ವರದಿಯ ಪ್ರಕಾರ ದೆಹಲಿಯ ಪ್ರತಿ 5 ಕುಟುಂಬಗಳಲ್ಲಿ 4 ಜನರು ಮಾಲಿನ್ಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ದೆಹಲಿ, ನೊಯ್ಡಾ, ಗಾಝಿಯಾಬಾದ್, ಗುರುಗ್ರಾಮ್ ನಿವಾಸಿಗಳ ಮೇಲೆ ಈ ಸಮೀಕ್ಷೆ ನಡೆದಿದೆ.
ಮಾಲಿನ್ಯ ವಿರೋಧಿ ಕ್ರಮದ ಭಾಗವಾಗಿ, ದೆಹಲಿ ಮತ್ತು ನೆರೆಯ ಜಿಲ್ಲೆಗಳಿಗೆ ಟ್ರಕ್ ಮತ್ತು ಡೀಸೆಲ್ ವಾಹನಗಳ ಪ್ರವೇಶವನ್ನು ನಿಷೇಧಿಸಲು ಕೇಂದ್ರೀಯ ಸಮಿತಿಯು ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಿದೆ.(ಏಜೆನ್ಸೀಸ್)