

ಶಿವಮೊಗ್ಗ: ಕೃತಕ ಅಭಿವೃದ್ಧಿಯ ಹಿಂದೆ ಬೀಳುವ ಮೂಲಕ ನಮ್ಮ ನಿರ್ನಾಮವನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅತಿಯಾದ ನೀರಿನ ಅಭಾವ ಉಂಟಾಗಲಿದ್ದು ಈ ಸಮಸ್ಯೆಯಿಂದ ಪಾರಾಗಲು ನಮಗೆ ಶುದ್ಧ ಗಾಳಿ, ನೀರು ನೀಡುವ ಹಸಿರಿನ ಶಕ್ತಿಗಾಗಿ ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕಿದೆ ಎಂದು ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ ಸಲಹೆ ನೀಡಿದರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಿಂದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಅಭಿವೃದ್ಧಿ ಜಿಲ್ಲಾ ಉಸ್ತುವಾರಿ ಸಮಿತಿ, ಜಿಲ್ಲಾ ಜೈವಿಕ ಇಂಧನ ಸಂಶೋಧನಾ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಹಯೋಗದಲ್ಲಿ ಗುರುವಾರ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈವಿಕ ಇಂಧನದ ಅಭಿವೃದ್ಧಿ ಮತ್ತು ಬಳಕೆ ತುರ್ತು ಹೆಚ್ಚಾಗಬೇಕಿದೆ ಎಂದರು.
ಮಳೆ ದುರ್ಬಲಗೊಳ್ಳುವುದರ ಮೂಲಕ ದೈನಂದಿನ ಜೀವನದ ಮೇಲೆ ಅತಿಯಾದ ಪರಿಣಾಮ ಬೀರಿದೆ. ಇನ್ನೂರು ವರ್ಷಗಳ ಹವಾಮಾನದ ದಾಖಲೆಗಳನ್ನು ನೋಡಿದಾಗ ಇತ್ತೀಚಿನ ಇಪ್ಪತ್ತು ವರ್ಷಗಳಲ್ಲಿ ಅತಿ ಹೆಚ್ಚು ಬಿಸಿಲು ಉಂಟಾಗಿದೆ. ಇಂತಹ ಪರಿಸ್ಥಿತಿಗಳ ಅರಿವೇ ಇಲ್ಲದಂತೆ ಮೊಬೈಲ್ ಹಿಡಿದ ಯುವ ಸಮೂಹ ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ.ರತ್ನಪ್ರಭಾ ಮಾತನಾಡಿ, ಪರಿಸರ ಪೂರಕವಾಗಿ ಬದುಕಬೇಕಿದೆ. ಪರಿಸರಕ್ಕೆ ಪೂರಕವಾದ ನವೀಕರಿಸಬಹುದಾದ ಇಂಧನಗಳ ಬಳಕೆ ಹೆಚ್ಚಾಗಲಿ ಎಂದು ಆಶಿಸಿದರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಇಲೆಕ್ಟ್ರಿಕಲ್ ವಿಭಾದ ಮುಖ್ಯಸ್ಥ ಡಾ. ಎಚ್.ಬಿ.ಸುರೇಶ್, ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕೇಂದ್ರದ ಸಂಚಾಲಕ ಎಸ್.ಜೆ.ಚೇತನ್, ಡಾ. ಬಿ.ಎಸ್.ರವಿಕುಮಾರ್, ಲೋಕೇಶ್ ಇತರರಿದ್ದರು.