

ಕೋಲಾರ: ಶ್ರದ್ಧೆ, ಆಸಕ್ತಿಯಿಂದ ನಿಮ್ಮ ಕಲಿಕೆ ಮುಂದುವರೆಸುವುದರ ಜತೆಗೆ ಜಿಲ್ಲೆಯನ್ನು ಕ್ರೀಡಾಕ್ಷೇತ್ರದಲ್ಲೂ ಮುಂಚೂಣಿಗೆ ತರಲು ಸಮಗ್ರ ಶಿಕ್ಷಣದ ಭಾಗವಾದ ಆಟೋಟಗಳಿಗೆ ಒತ್ತು ನೀಡಿ, ನಿರಂತರ ಅಭ್ಯಾಸದಿಂದ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಸಂಸದ ಎಂ.ಮಲ್ಲೇಶಬಾಬು ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಗರದ ರವಿ ಪಿಯು ಹಾಗೂ ಪದವಿ ಕಾಲೇಜು ಆಶ್ರಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಟಿವಿಯಲ್ಲಿ ನೋಡಿ ಖುಷಿಪಡುವುದು ಮಾತ್ರವಲ್ಲ. ನೀವು ಅವರಂತೆ ಸಾಧನೆ ಮಾಡುವ ಆತ್ಮವಿಶ್ವಾಸದೊಂದಿಗೆ ಕ್ರೀಡಾಭ್ಯಾಸ ಮಾಡಿ, ಕೋಲಾರ ಜಿಲ್ಲೆಯನ್ನು ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಳಗುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ರವಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ ಮಾತನಾಡಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದ ಪಿಯುಸಿ ಹಂತಕ್ಕೆ ಬಂದಿದ್ದೀರಿ, ಪಿಯುಸಿ ನಿಮ್ಮ ಜೀವನದ ಹಾದಿ ಗುರುತಿಸುವ ಅತಿ ಮುಖ್ಯ ಘಟ್ಟವಾಗಿದೆ. ಇಲ್ಲೇ ನೀವು ಮುಂದೆ ವೈದ್ಯರೋ, ಇಂಜಿನಿಯರೋ, ಶಿಕ್ಷಕರೋ ಎಂಬುದನ್ನು ನಿರ್ಧರಿಸುವ ದಾರಿ ಗೋಚರವಾಗುತ್ತದೆ ಎಂದರು.
ರವಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಜಿ.ನರೇಶಬಾಬು, ಎ.ಸುಷ್ಮಾ, ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು ವಾಣಿಜ್ಯವಿಭಾಗದ ಮುಖ್ಯಸ್ಥ ಮುರಳೀಧರ್, ರವಿ ಬಿಎಡ್ ಕಾಲೇಜು ಪ್ರಾಂಶುಪಾಲ ಮಂಜುನಾಥರೆಡ್ಡಿ, ಪದವಿ ಕಾಲೇಜು ಪ್ರಾಂಶುಪಾಲ ಸಲೀಂಪಾಷಾ, ಉಪನ್ಯಾಸಕರಾದ ಲಿಯಾಖತ್ ಅಲಿಖಾನ್, ಸೈಯದ್ ಹೈದರ್, ಮಹ್ಮದ್ ಝಹೀರ್, ಬಾಬಾಜಾನ್, ಸೈಯದ್ ಅಜ್ಮಲ್ಪಾಷಾ ಇದ್ದರು.