ಸಂಪಾದಕೀಯ: ಅನುದಾನ ಪ್ರಮಾಣ ಹೆಚ್ಚಿಸಿ

ss
Published on

ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ, ‘ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈಗಾಗಲೇ ಶೇಕಡ 90ರಷ್ಟು ಪಠ್ಯಪುಸ್ತಕಗಳು ರವಾನೆಯಾಗಿವೆ ಎಂದಿದ್ದಾರೆ. ಆದರೆ, ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಸರ್ಕಾರ ಪುಡಿಗಾಸು ನೀಡುತ್ತಿದೆ. 1ರಿಂದ 5ನೇ ತರಗತಿಯವರಿಗೆ 265 ರೂ., 6ರಿಂದ 8ರವರೆಗಿನ ಮಕ್ಕಳಿಗೆ 295 ರೂಪಾಯಿ ಮತ್ತು 9-10ನೇ ತರಗತಿ ಮಕ್ಕಳಿಗೆ 325 ರೂ.ಗಳನ್ನು ಶೂ-ಸಾಕ್ಸ್ ಖರೀದಿಗೆ ನಿಗದಿಪಡಿಸಲಾಗಿದೆ. ಇಷ್ಟು ಕಡಿಮೆ ಮೊತ್ತಕ್ಕೆ ಕಳಪೆ ವಸ್ತುಗಳು ಮಾತ್ರ ಬರಲು ಸಾಧ್ಯ. ಈಗಿನ ದುಬಾರಿ ದುನಿಯಾದಲ್ಲಿ ಇಷ್ಟು ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಶೂ ಅಥವಾ ಪಾದರಕ್ಷೆ ಖರೀದಿಸಲು ಸಾಧ್ಯವೇ? ಈ ಮಾನದಂಡವನ್ನು ನಿಗದಿ ಮಾಡುವ ಮುಂಚೆ ಮಾರುಕಟ್ಟೆ ದರವನ್ನು ಅವಲೋಕಿಸಿ, ಸೂಕ್ತ ನಿರ್ಣಯಕ್ಕೆ ಬರುವುದು ಅವಶ್ಯಕವಾಗಿತ್ತು.

ಸರ್ಕಾರ ಸೌಲಭ್ಯಗಳೇನೋ ನೀಡುತ್ತದೆ. ಆದರೆ, ಅವು ಗುಣಮಟ್ಟದಿಂದ ಕೂಡಿರದಿದ್ದರೆ, ಸಮರ್ಪಕವಾಗಿ ಇರದಿದ್ದರೆ ಅದರಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ? ಅಲ್ಲದೆ, ಈ ಅಪಸವ್ಯದಿಂದ ಮಕ್ಕಳ ಪಾಲಕರಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲ. ಈ ಹಿಂದೆ ಸಮವಸ್ತ್ರದ ಗುಣಮಟ್ಟದ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದಿದ್ದವು ಎಂಬುದನ್ನು ಮರೆಯುವಂತಿಲ್ಲ.

ಈಗಷ್ಟೇ ಶಾಲೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಪಾಲಕರು, ಮಕ್ಕಳು ಸರ್ಕಾರಿ ಶಾಲೆಗಳತ್ತ ಆಶಾವಾದದಿಂದ ನೋಡುತ್ತಿದ್ದಾರೆ. ಅಲ್ಲದೆ, ಕರೊನಾ ಸಾಂಕ್ರಾಮಿಕ ಹಾವಳಿಯ ನಂತರದ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿದ್ದು ಸಕಾರಾತ್ಮಕ ಬೆಳವಣಿಗೆ. ಈ ಅಂಶವನ್ನು ಸರ್ಕಾರ ಶಾಲೆಗಳ ಸಬಲೀಕರಣಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕು. ಈಗಲೂ ವಿಳಂಬವಾಗಿಲ್ಲ. ಶೈಕ್ಷಣಿಕ ವರ್ಷದ ಆರಂಭಿಕ ಘಟ್ಟದಲ್ಲಿ ನಾವು ಇರುವುದರಿಂದ ಸರ್ಕಾರಿ ಶಾಲೆ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಅನುದಾನವನ್ನು ಹೆಚ್ಚಿಸಬೇಕು. ಅಲ್ಲದೆ, ಖರೀದಿ ಹೊಣೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ (ಎಸ್​ಡಿಎಂಸಿ) ವಹಿಸಲಾಗಿದ್ದು, ಯಾವುದೇ ಲೋಪವಾಗದಂತೆ, ಗುಣಮಟ್ಟದಲ್ಲಿ ರಾಜಿ ಆಗದಂತೆ ನಿಗಾ ವಹಿಸಬೇಕು. ಮುಖ್ಯವಾಗಿ, ಅದೆಷ್ಟೋ ಶಾಲೆಗಳು ಮೂಲಸೌಕರ್ಯವಿಲ್ಲದೆ ಬಳಲುತ್ತಿದ್ದು, ಅವುಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿಗಳ ದುರಸ್ತಿ ಮಾಡಿಸಿ, ಶೌಚಗೃಹ, ಶುದ್ಧ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣದ ವ್ಯವಸ್ಥೆ ಮಾಡಬೇಕಿದೆ. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಸಮಯಕ್ಕೆ ಸರಿಯಾಗಿ ಪೂರೈಕೆಯಾಗಬೇಕು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿರುವ ಹೊತ್ತಲ್ಲಿ ಮೂಲಸೌಕರ್ಯದ ವಿಸ್ತರಣೆಯ ಜತೆಗೆ ಸೂಕ್ತ ಕಲಿಕಾ ವಾತಾವರಣ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕು. ಆ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net