

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ, ಜೈಲುಪಾಲಾಗಿರುವ ಅಮೂಲ್ಯಾ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾಳೆ. ಬಸವೇಶ್ವರನಗರ ಠಾಣೆಯಲ್ಲಿರುವ ಅಮೂಲ್ಯಾಳನ್ನು ವಿಚಾರಣೆ ನಡೆಸುವುದು ಎಸ್ಐಟಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ತಿನ್ನಲು ಚಿಕನ್ ಪಾಪ್ಕಾರ್ನ್, ಕುಡಿಯಲು ಕಿನ್ಲೆ ಮಿನರಲ್ ವಾಟರ್ ಬೇಕು ಎನ್ನುತ್ತಿದ್ದಾಳೆ. ಪೊಲೀಸರು ಏನೇ ಪ್ರಶ್ನೆ ಕೇಳಿದರೂ, ಮೊದಲು ನಾನು ಕೇಳಿದ್ದನ್ನು ತಂದುಕೊಡಿ, ಆಮೇಲೆ ಪ್ರಶ್ನೆ ಮಾಡಿ ಎಂದು ಹೇಳುತ್ತಿದ್ದಾಳೆ.
ಅಷ್ಟೇ ಅಲ್ಲದೆ, ಅಮೂಲ್ಯಾ ಮಹಿಳಾ ಪೊಲೀಸ್ ಪೇದೆಗಳಿಗೆ ಸಿಕ್ಕಾಪಟೆ ಕಿಚಾಯಿಸುತ್ತಿದ್ದಾಳೆ. ತಲೆಕೂದಲು ಉದ್ದವಾಗಿ ಬಿಟ್ಟು ಜಡೆ ಹಾಕಿಕೊಳ್ಳುವ ಮಹಿಳಾ ಪೇದೆಗಳಿಗೆ ಅಮೂಲ್ಯಾ ಹೇರ್ಕಟ್ ಮಾಡುವಂತೆ ಸಲಹೆ ನೀಡುತ್ತಿದ್ದಾಳೆ. ನೀವ್ಯಾಕೆ ನನ್ನ ತರಹನೇ ಕೂದಲು ಕತ್ತರಿಸಿಕೊಳ್ಳಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾಳೆ. ಇನ್ನು ಅಮೂಲ್ಯಾ ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಆಕೆಯ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪಾಕಿಸ್ತಾನಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಅಮೂಲ್ಯಾಳ ಫೇಸ್ಬುಕ್, ಟ್ವಿಟರ್ ಅಕೌಂಟ್ಗಳನ್ನು ಪಾಕ್ ಪ್ರಜೆಗಳು ಫಾಲೋ ಮಾಡುತ್ತಿದ್ದಾರೆ. ಆಕೆಯ ಪೋಸ್ಟ್ಗೆ ಪಾಕ್ ಅಭಿಮಾನಿಗಳು ಲೈಕ್ಸ್ ನೀಡುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ ಜಿಂದಾಬಾದ್ ಎಂದು ಕಾಮೆಂಟ್ಗಳನ್ನು ಬರೆಯುತ್ತಿದ್ದಾರೆ.
ಫೆ.17ರಂದು ಬಿಲಾಲ್ಬಾಘ್ನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಫೋಟೋಕ್ಕೆ ಪಾಕಿಸ್ತಾನದ ಮೊರಾದಾಬಾದ್ನ ಮುಮ್ತಾಜ್ ಎಂಬಾತ ಪಾಕಿಸ್ತಾನ ಜಿಂದಾಬಾದ್ ಎಂದು ಕಾಮೆಂಟ್ ಹಾಕಿದ್ದಾನೆ. (ದಿಗ್ವಿಜಯ ನ್ಯೂಸ್)