ತೆರಿಗೆ ಸಂಘರ್ಷ ಮಾತಿನ ಸಮರದ ನಡುವೆ ಪಾಲು ಹೆಚ್ಚಳ!

Nirmala vs Siddu
Published on

ಮೃತ್ಯುಂಜಯ ಕಪಗಲ್ ಬೆಂಗಳೂರು
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಕೊಡು-ಕೊಳ್ಳುವಿಕೆ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅರ್ಥಶಾಸ್ತ್ರ ನಿಪುಣರು, ತೆರಿಗೆ ತಜ್ಞರ ನಡುವೆ ಚರ್ಚೆಯಾಗುತ್ತಿದ್ದ ಈ ವಿಷಯವೀಗ ಜನಸಾಮಾನ್ಯರ ಹಂತಕ್ಕೂ ತಲುಪಿದೆ. ತೆರಿಗೆ ಸಂಘರ್ಷ, ಮಾತಿನ ಸಮರದ ನಡುವೆ ತೆರಿಗೆ ಪಾಲಿನ ಪ್ರಮಾಣದಲ್ಲಿ ವೇಗೋತ್ಕರ್ಷದ ಬೆಳವಣಿಗೆಯಾಗಿದೆ! ರಾಜ್ಯದಿಂದ ಹೆಚ್ಚು ಪ್ರಮಾಣದ ತೆರಿಗೆ ಸಂದಾಯಕ್ಕೆ ಅನುಗುಣವಾಗಿ ಪಾಲಿನಲ್ಲಿ ಸದ್ದಿಲ್ಲದೆ ಕೇಂದ್ರ ಸರ್ಕಾರ ಮೂರು ಸಾವಿರ ಕೋಟಿ ರೂ. ಹೆಚ್ಚಳ ಮಾಡಿರುವುದು ಗಮನಾರ್ಹ.

ಈ ನಡುವೆ ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಅಪಸ್ವರ ಎತ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಘೊಷವಾಕ್ಯದಡಿ ದೆಹಲಿಯಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಧರಣಿ ನಡೆಸಿದ್ದೂ ಆಗಿದೆ.

ರಾಜಕೀಯ ಲೇಪನ: ರಾಜ್ಯಗಳಿಗೆ ತೆರಿಗೆ ಪಾಲು, ಅನುದಾನ ಹಂಚಿಕೆ ವಿಷಯವನ್ನು ಕಾಂಗ್ರೆಸ್ ಚುನಾವಣೆಗೆ ಅಸ್ತ್ರವಾಗಿ ಬಳಸಲು ಹವಣಿಸಿದೆ ಎಂಬ ಮಾತು ರಾಜಕೀಯ ಅಂಗಳದಲ್ಲಿ ಓಡಾಡುತ್ತಿದೆ. ಈ ಪ್ರಯತ್ನ ವಿಫಲಗೊಳಿಸಲು ಬಿಜೆಪಿ ಕೂಡ ಪ್ರತ್ಯಸ್ತ್ರ ಪ್ರಯೋಗಿಸಿದೆ. ಸಂಸತ್ ಬಜೆಟ್ ಅಧಿವೇಶನದ ಕೊನೇ ದಿನ ಎರಡು ದಶಕಗಳ ಹಣಕಾಸಿನ ಸ್ಥಿತಿಗತಿ ಸಂಕ್ಷಿಪ್ತವಾಗಿ ವಿವರಿಸುವ ಶ್ವೇತಪತ್ರ ಪ್ರಕಟಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ, ಅನುದಾನ ಹಂಚಿಕೆ, ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನೇ ನೀಡಿ, ರಾಜ್ಯದ ಜನರಿಗೆ ತಪು್ಪ ಮಾಹಿತಿ ಹೋಗುವುದನ್ನು ತಡೆಯಲು ಕಮಲಪಡೆ ಪಾಳಯವು ಬೆವರು ಇಳಿಸುತ್ತಿರುವುದಂತೂ ದಿಟ.

ಪ್ರಾದೇಶಿಕತೆ ವರ್ಸಸ್ ರಾಷ್ಟ್ರೀಯತೆ ಎಂಬ ತಿರುವು ನೀಡುವ ಈ ಪ್ರಯತ್ನದ ಬಗ್ಗೆ ಕಾಂಗ್ರೆಸ್ ಪಕ್ಷ ಜಾಗೃತವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ನ್ಯಾಯಯುತ ಪಾಲಿಗೆ ಆಗ್ರಹಿಸುತ್ತಿದ್ದೇವೆ ಎಂದು ತನ್ನ ನಿಲುವು ಸ್ಪಷ್ಟಪಡಿಸಿದೆ. ಉಭಯ ಪಕ್ಷಗಳ ಕಸರತ್ತು, ಹಕೀಕತ್ತು ಗಮನಿಸಿದ ಜನರು ಚುನಾವಣಾ ರಾಜಕಾರಣವನ್ನು ಗ್ರಹಿಸಿದ್ದಾರೆ.

ವಿಳಂಬದ ಪರಿಣಾಮ: ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ಖರ್ಚು, ಹಣ ಬಳಕೆ ಪ್ರಮಾಣಪತ್ರ ಸಲ್ಲಿಸದ ಪರಿಣಾಮವೂ ಕೆಲವು ಯೋಜನೆಗಳಲ್ಲಿ ಗೋಚರಿಸಿದೆ. 60:40 ಹಾಗೂ 75:25 ಅನುಪಾತದಂತೆ ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಿದ್ದರೂ ರಾಜ್ಯ ಸರ್ಕಾರ ಮೀಸಲಿಟ್ಟ ತನ್ನ ಪಾಲಿನ ಮೊತ್ತ ಜನವರಿ ತನಕವೂ ವೆಚ್ಚ ಮಾಡದಿರುವುದು ಬೆಳಕಿಗೆ ಬಂದಿದೆ. ಕೇಂದ್ರದ ಸ್ವಚ್ಛಭಾರತ, ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ) ಅಮೃತ್ ಮಿಷನ್, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ, ತುಂಗಾ ಮೇಲ್ದಂಡೆ, ನಾರಾಯಣಪೂರ ಎಡದಂಡೆ ಕಾಲುವೆ ಆಧುನೀಕರಣ, ಪ್ರಧಾನಮಂತ್ರಿ ಆದರ್ಶ ಯೋಜನೆ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೇರಿ ಒಟ್ಟು 5,980.79 ಕೋಟಿ ರೂ. ಅನುದಾನವನ್ನು ಕೇಂದ್ರ ಕಾದಿರಿಸಿದೆ. ಮ್ಯಾಚಿಂಗ್ ಗ್ರಾ್ಯಂಟ್ ರೂಪದಲ್ಲಿ ರಾಜ್ಯ ಸರ್ಕಾರ ಪ್ರಸ್ತಾವಿತ ಯೋಜನೆಗಳಿಗೆ ನಯಾ ಪೈಸೆ ಖರ್ಚು ಮಾಡಿಲ್ಲ, ಹಣ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗಿಲ್ಲವೆಂದು ಮೂಲಗಳು ತಿಳಿಸಿವೆ.

ಚಾಲ್ತಿ ಸ್ಥಿತಿಗತಿ: ಪ್ರಸಕ್ತ ಹಣಕಾಸು ವರ್ಷ (2023-24)ದಲ್ಲಿ ಕೇಂದ್ರ ಸರ್ಕಾರವು 37,252 ಕೋಟಿ ರೂ. ತೆರಿಗೆ ಹಂಚಿಕೆ ಮಾಡುವ ಅಂದಾಜಿತ್ತು. ಜನವರಿ ಎರಡನೇ ವಾರದವರೆಗೆ 29,914 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಎಸ್​ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಭಾಜನವಾಗಿದ್ದು, ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಸ್ಪಂದಿಸಿದೆ. ಬಹಿರಂಗ ರಾಜಕೀಯ ಜಿದ್ದಾಜಿದ್ದಿಗಳೇನೇ ಇರಲಿ. ಸಂವಿಧಾನಾತ್ಮಕ ಬದ್ಧತೆ, ಸರ್ಕಾರವಾಗಿ ಹೇಗೆ ವರ್ತಿಸಬೇಕೋ ಅದೇ ರೀತಿ ಕೇಂದ್ರ-ರಾಜ್ಯ ಸರ್ಕಾರಗಳು ವರ್ತಿಸುತ್ತಿವೆ. ಉತ್ತಮ ಸಂಗ್ರಹಕ್ಕೆ ತಕ್ಕ ಉತ್ತೇಜನ ಬಯಸಿ ಅಧಿಕೃತವಾಗಿ ನಡೆದ ಪತ್ರ ವ್ಯವಹಾರಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಇದರಿಂದಾಗಿ ಪ್ರಸಕ್ತ ವರ್ಷಕ್ಕೆ ರಾಜ್ಯದ ತೆರಿಗೆ ಪಾಲಿನ ಮೊತ್ತವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿ 37,252 ಕೋಟಿ ರೂ.ಗಳಿಂದ 40 ಸಾವಿರ ಕೋಟಿ ರೂ.ಗಳಿಗೇರಿಸಿದೆ. ಅಂದರೆ ಆರ್ಥಿಕ ಇಲಾಖೆ ಮೂಲಗಳ ಮಾಹಿತಿ ಪ್ರಕಾರ ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ರೂ. ಲಭಿಸಲಿದೆ. ಕೇಂದ್ರ ಸರ್ಕಾರ ವಿವಿಧ ಯೋಜನೆಗಳು, ಕಾರ್ಯಕ್ರಮಗಳಡಿ ರಾಜ್ಯಕ್ಕೆ ಒಟ್ಟು 13,005 ಕೋಟಿ ರೂ. ಭರವಸೆ ನೀಡಿತ್ತು. ಈ ಪೈಕಿ 8,600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ನಿವಾರಣೆ ನಿಧಿ (ಎಸ್​ಡಿಆರ್​ಎಫ್)ಯಡಿ 75:25 ಅನುಪಾತದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕಾದಿರಿಸಬೇಕು. ಈ ಪ್ರಕಾರ ಪ್ರಸಕ್ತ 910 ಕೋಟಿ ರೂ. ಮೀಸಲಿರಿಸಿದ್ದು, ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲ ಮೊತ್ತವನ್ನು ಬಿಡುಗಡೆ ಮಾಡಿದೆ. ಬರಪೀಡಿತ ಪ್ರದೇಶದ 33 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ.ನಂತೆ ಬಿಡುಗಡೆ ಮಾಡಿದ ಒಟ್ಟು 628 ಕೋಟಿ ರೂ.ಗಳಲ್ಲಿ ಕೇಂದ್ರದ ಅನುದಾನವೂ ಸೇರಿದೆ. ಇನ್ನೂ ಕೆಲವು ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ವ್ಯಯಿಸಿ ಹಣಬಳಕೆ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಅನುದಾನ ಬಿಡುಗಡೆಯಾಗಲಿದೆ. ಇದು, ಪ್ರತಿ ವರ್ಷವೂ ಅನುಸರಿಸಿಕೊಂಡ ಬಂದ ಪ್ರಕ್ರಿಯೆಯಾಗಿದೆ.

ವ್ಯತ್ಯಾಸದ ಜಿಜ್ಞಾಸೆ: 14ನೇ ಹಣಕಾಸು ಆಯೋಗ ಅಸ್ತಿತ್ವದಲ್ಲಿದ್ದ ಕಾಲಕ್ಕೆ 15ನೇ ಹಣಕಾಸು ಆಯೋಗ ರಚನೆ, ನಿಬಂಧನೆ ಮತ್ತು ಮಾನದಂಡ ಅಳವಡಿಕೆ ಪ್ರಕ್ರಿಯೆ ನಡೆದಿದೆ. ಆ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಿಯಾಗಿ ವಾದ ಮಂಡಿಸದ ಕಾರಣ ತೆರಿಗೆ ಪಾಲು ಶೇ.4.71 ರಿಂದ ಶೇ.3.64ಕ್ಕೆ ಇಳಿಯಿತು ಎನ್ನುವುದು ಬಿಜೆಪಿ ಆರೋಪ. ಆದರೆ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಅನುದಾನ ಕೊಡಬೇಕಾಗಿದ್ದರಿಂದ ಎಲ್ಲ ರಾಜ್ಯಗಳಂತೆ ಕರ್ನಾಟಕಕ್ಕೂ ಶೇ.1ರಷ್ಟು ತಗ್ಗಿದೆ ಎನ್ನುವುದು ಮೂಲಗಳ ಮಾಹಿತಿ. ಅಷ್ಟೇ ಅಲ್ಲ, 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಪ್ರಸ್ತಾಪಿಸಿದ್ದ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಪರಿಹಾರ ಮೊತ್ತವು ಆಯೋಗದ ಅಂತಿಮ ವರದಿ ಯಲ್ಲಿ ಕಾಣೆಯಾದದ್ದೂ ವ್ಯತ್ಯಾಸದ ಜಿಜ್ಞಾಸೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ಪ್ರತಿವಾದ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯ 10 ವರ್ಷಗಳಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 82 ಸಾವಿರ ಕೋಟಿ ರೂ. ಮತ್ತು ಅನುದಾನ ಹಂಚಿಕೆ ಪ್ರಮಾಣ 60 ಸಾವಿರ ಕೋಟಿ ರೂ.ಗಳಾಗಿತ್ತು. ಅದೇ ಬಿಜೆಪಿ ನೇತೃತ್ವದ ಎನ್​ಡಿಎ ಆಡಳಿತಾವಧಿಯಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ತೆರಿಗೆ ಪಾಲು 2.81 ಲಕ್ಷ ಕೋಟಿ ರೂ., ಅನುದಾನ 2.08 ಲಕ್ಷ ಕೋಟಿ ರೂ. ಹಂಚಿಕೆಯಾಗಿದೆ ಎನ್ನುವುದು ಕೇಂದ್ರ ಸರ್ಕಾರದ ಪ್ರತಿವಾದ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಮೆಟ್ರೋ, ಉಪನಗರ ರೈಲು ಮುಂತಾದ ಮೂಲ ಸವಲತ್ತಿಗೆ ಹೆಚ್ಚಿನ ನೆರವು ಹರಿದುಬಂದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಖರ್ಚು ಮಾಡಿದರೆ ಕೇಂದ್ರ ಘೋಷಿತ 5,300 ಕೋಟಿ ರೂ. ಬಿಡುಗಡೆಯಾಗಲಿದೆ.

ರಾಜ್ಯ ಸರ್ಕಾರದ ವಾದ: ಕಳೆದ ಐದಾರು ವರ್ಷಗಳಲ್ಲಿ ರಾಜ್ಯದ ನ್ಯಾಯಯುತ ಪಾಲು 1.87 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿಲ್ಲ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಶೇಕಡ 4.71 ಬಂದಿತ್ತು. 15ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿದಿದೆ. ರಾಜ್ಯದಿಂದ ಒಟ್ಟು 4.30 ಲಕ್ಷ ಕೋಟಿ ರೂ. ಸಂದಾಯವಾದರೆ ಕೇಂದ್ರದಿಂದ 50 ಸಾವಿರ ಕೋಟಿ ರೂ.ಗಳಷ್ಟೇ ಬಂದಿದೆ. 14ನೇ ಹಣಕಾಸು ಆಯೋಗದ ಶಿಫಾರಸು 15ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ 62,098 ಕೋಟಿ ರೂ. ಬರುತ್ತಿತ್ತು. ಜಿಎಸ್​ಟಿ ಜಾರಿಯಾದ ಬಳಿಕ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಜಿಎಸ್​ಟಿ ಪರಿಹಾರದ ಅವಧಿ 2022ರ ಜೂನ್​ಗೆ ಕೊನೆಗೊಳಿಸಲಾಗಿದೆ. ಇದರಿಂದಾಗಿ 22 ಸಾವಿರ ಕೋಟಿ ರೂ. ಖೋತಾ ಆಗಿದೆ ಎನ್ನುವುದು ರಾಜ್ಯ ಸರ್ಕಾರದ ವಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net