

ಬೆಂಗಳೂರು: ಕರ್ನಾಟಕದಲ್ಲಿ 7000 ಆನೆಗಳಿದ್ದು, ಸಂತತಿ ಹೆಚ್ಚಾಗುತ್ತಿದೆ. ಗಂಡು, ಹೆಣ್ಣಾನೆಗಳು ಸರಾಸರಿ ಸಮಾನವಾಗಿದೆ ಎಂದು ನ್ಯಾಯಾಲಯಕ್ಕೆ ನೆರವು ನೀಡಲು ನೇಮಿಸಲಾಗಿರುವ ಅಮಿಕಸ್ ಕ್ಯೂರಿ ಶುಕ್ರವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಆನೆಗಳೂ ಸೇರಿ ಇತರ ವನ್ಯಜೀವಿಗಳು ವಿದ್ಯುತ್ ತಂತಿ ತಗುಲಿ ಮೃತಪಡುತ್ತಿರುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ರಮೇಶ್ ಪುತ್ತಿಗೆ, ದೇಶದಲ್ಲಿ 2023ರಲ್ಲಿ ನಡೆದ ಆನೆ ಗಣತಿಯ ಪ್ರಕಾರ 27 ಸಾವಿರ ಆನೆಗಳಿದ್ದು, ವಯಸ್ಕ ಆನೆಗಳಲ್ಲಿ ಸರಾಸರಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಡಾನೆಗಳಿಗಿಂತಲೂ ಹೆಣ್ಣಾನೆಗಳ ಪ್ರಮಾಣ ಶೇ.50 ಕಡಿಮೆಯಿದೆ. ಗಂಡಾನೆಗಳನ್ನು ಕೊಂದು ದಂತಗಳನ್ನು ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಆನೆಗಳನ್ನು ಅರಣ್ಯದಿಂದ ಹೊರ ಬರದಂತೆ ನಿಯಂತ್ರಿಸಲು ಹಳೆಯ ರೈಲ್ವೆ ಕಂಬಿಗಳ ಮೂಲಕ 332.62 ಕಿಲೋ ಮೀಟರ್‌ಗಳ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಜತೆಗೆ, 3,426 ಕಿಲೋಮೀಟರ್ ಸೋಲಾರ್ ಫೆನ್ಸಿಂಗ್ ಹಾಕಲಾಗಿದೆ. ಪ್ರಾಣಿಗಳ ಜೀವಕ್ಕೆ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಬೆಸ್ಕಾಂ ಸೇರಿ ರಾಜ್ಯದ ಎಸ್ಕಾಂಗಳಿಗೆ ನೋಟಿಸ್ ಜಾರಿಗೊಳಿಸಿ, ಆ.12ಕ್ಕೆ ವಿಚಾರಣೆ ಮುಂದೂಡಿತು.