ಬ್ಯಾಂಕ್ ಕೆಲಸ ತೊರೆಯುವವರ ಸಂಖ್ಯೆ ಏರಿಕೆ

ವಿಜಯವಾಣಿ (5)
Published on

ಖಾಸಗಿ ವಲಯದಲ್ಲಿ ಶೇ. 25ರಷ್ಟು ಜಾಸ್ತಿ | ಕಾರ್ಯಾಚರಣೆಗೆ ತೊಂದರೆ

ನವದೆಹಲಿ: ಖಾಸಗಿ ವಲಯದ ಬ್ಯಾಂಕ್​ಗಳಲ್ಲಿ ಕೆಲಸ ಬಿಡುವ ಉದ್ಯೋಗಿಗಳ ಸಂಖ್ಯೆ ಶೇ. 25ರಷ್ಟು ಹೆಚ್ಚಾಗಿದ್ದು ಇದರಿಂದ ಕಾರ್ಯಾಚರಣೆಗೆ ಗಣನೀಯ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ ಎಂದು ‘ಭಾರತದಲ್ಲಿ ಬ್ಯಾಂಕಿಂಗ್​ನ ಪ್ರಗತಿ ಮತ್ತು ಪ್ರವೃತ್ತಿ 2023-24’ ವರದಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಈ ವರದಿಯನ್ನು ಬಿಡುಗಡೆ ಮಾಡಿದ್ದು, ಕೆಲಸ ಬಿಡುವವರ ಸಂಖ್ಯೆ ಖಾಸಗಿ ಬ್ಯಾಂಕ್​ಗಳಲ್ಲದೆ ಸಣ್ಣ ಹಣಕಾಸು ಬ್ಯಾಂಕ್(ಎಸ್​ಎಫ್​ಬಿ)ಗಳಲ್ಲೂ ಜಾಸ್ತಿ ಇದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

2023-24ರಲ್ಲಿ ಖಾಸಗಿ ಬ್ಯಾಂಕ್​ಗಳ ನೌಕರರ ಸಂಖ್ಯೆಯು ಸಾರ್ವಜನಿಕ ವಲಯದ ಬ್ಯಾಂಕ್​ಗಳ ಉದ್ಯೋಗಿಗಳ ಸಂಖ್ಯೆಯನ್ನು ಮೀರಿ ಬೆಳೆದಿದೆ. ಆದರೆ ಮಧ್ಯದಲ್ಲೇ ಕೆಲಸ ತೊರೆಯುವವರ ಪ್ರಮಾಣ ಕಳೆದ 3 ವರ್ಷಗಳಲ್ಲಿ ತೀವ್ರವಾಗಿ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಸೇವೆ ನೀಡುವಲ್ಲಿ ತೊಂದರೆ ಆಗುತ್ತಿದೆ. ನೇಮಕಾತಿಯ ವೆಚ್ಚವೂ ಜಾಸ್ತಿ ಆಗುತ್ತಿದೆ. ಬ್ಯಾಂಕ್​ಗಳು ಇದನ್ನು ನಿಯಂತ್ರಿಸಲು ತರಬೇತಿ, ಮಾರ್ಗದರ್ಶನ ಕಾರ್ಯಕ್ರಮ, ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಮುಂತಾದವುಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಾಗಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net