ರುದ್ರ ಪಠಣದಿಂದ ಮತ್ಸರ ದೂರವಾಗಿ ಧನಾತ್ಮಕ ಶಕ್ತಿ ಹೆಚ್ಚಳ

8ald 1
ಆಲ್ದೂರಿನಲ್ಲಿ ರುದ್ರ ಪಾರಾಯಣ ಶಿಬಿರವನ್ನು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಿದ್ದಲಿಂಗ ಸ್ವಾಮೀಜಿ, ಡಾ. ದಯಾನಂದ ಶಾಸ್ತ್ರಿ, ಶಿವಕುಮಾರ್, ಬಸವರಾಜು ಇದ್ದರು.
Published on

ಆಲ್ದೂರು: ರುದ್ರ ಪಠಣದಿಂದ ಮದ, ಮತ್ಸರ ದೂರವಾಗಿ ಧನಾತ್ಮಕ ಶಕ್ತಿ ಬೆಳೆಯುತ್ತದೆ. ಏಕಾದಶಾ ರುದ್ರ ಮಾಡುವುದರಿಂದ ಸಂಸ್ಕಾರ ಸಿಗುತ್ತದೆ. ಮಂತ್ರ ಪಠಣದಿಂದ ರೋಗ ಮುಕ್ತಿಯಾಗುತ್ತದೆ ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಕುಮಾರ್ ಅವರ ಮನೆಯಲ್ಲಿ ಆಯೋಜಿಸಿದ್ದ ರುದ್ರ ಪಾರಾಯಣ ಶಿಬಿರದಲ್ಲಿ ಮಾತನಾಡಿ, ಶ್ರೀ ದೇವಿ ಗುರುಕುಲದವರು ಧರ್ಮದ ಮೂಲಕ ವಿದ್ಯೆಯನ್ನು ಸಾರ್ವಕಾಲೀಕವಾಗಿ ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಶಿಬಿರ ಹಮ್ಮಿಕೊಂಡಿದ್ದು, ರುದ್ರ ಪಠಣದಿಂದ ಮನಸ್ಸು ಶಾಂತವಾಗಿರುತ್ತದೆ ಎಂದರು.
ಬಳ್ಳಾರಿ ಜಿಲ್ಲೆ ಕೂಡೂರು ತಾಲೂಕು ಆಲೂರಿನ ಉಜ್ಜಯಿನಿ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಂತ್ರದಿಂದ ಮನಸ್ಸು ಗಟ್ಟಿಯಾಗುತ್ತದೆ. ರುದ್ರ ಎಂದರೆ ಕ್ಷುದ್ರ ಶಕ್ತಿಯನ್ನು ನಾಶ ಮಾಡುವ ಶಕ್ತಿ ಹೊಂದಿರುವ ಮಂತ್ರ. ತ್ರಿಕಾಲ ಲಿಂಗ ಪೂಜೆ ಮಾಡುವುದರಿಂದ ಅಂಗಶುದ್ಧಿಯಾಗುತ್ತದೆ ಎಂದು ತಿಳಿಸಿದರು.
ಶ್ರೀ ದೇವಿ ಗುರುಕುಲ ಪಾಠಶಾಲಾ ಸಂಸ್ಥಾಪಕ ಡಾ. ದಯಾನಂದ ಶಾಸ್ತ್ರಿ ಮಾತನಾಡಿ, ಆಲ್ದೂರಲ್ಲಿ ರುದ್ರ ಪಾರಾಯಣ ಶಿಬಿರ ನಾಲ್ಕನೇಯ ಶಾಖೆಯಾಗಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಲ್ದೂರು ಪೂರ್ಣಪ್ರಜ್ಞಾ ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಿ.ರೇಣುಕಾರ್ಯ ಮಾತನಾಡಿ, ರುದ್ರ ಪಠಣದಿಂದ ಆಧ್ಯಾತ್ಮಿಕ ಸಾಧನೆ ಮಾಡಲು ಸಾಧ್ಯ. ವೇದ ಅಧ್ಯಯನ ಮಾಡುವುದರಿಂದ ಅರಿಷಡ್ವರ್ಗಗಳನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ ಎಂದರು. ಶಿವಕುಮಾರ್, ಬಸವರಾಜು, ಸಹನಾ, ಅನಿತಾ, ಭಾಗ್ಯಾ ಕುಮಾರ್, ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net