ಪೋಕ್ಸೋ ಪ್ರಕರಣ ಹೆಚ್ಚಳ: ಅಪರ್ಣಾ ಎಂ.ಕೊಳ್ಳ ಆತಂಕ

zp meeting
ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಅನುಷ್ಠಾನ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿ.ಎಂ.ರೇಖಾ, ಸುಜಾತಾ, ಸಂತೋಷ್‌ಕುಮಾರ್, ಬಾಬು ಅಂಜನಪ್ಪ, ಮಂಜುನಾಥ್ ಉಪಸ್ಥಿತರಿದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಸುಸಂಸ್ಕೃತ ಜಿಲ್ಲೆ ಎನಿಸಿಕೊಂಡಿರುವ ಶಿವಮೊಗ್ಗಕ್ಕೆ ಇದು ಶೋಭೆ ತರುವುದಿಲ್ಲ. 10 ಇಲಾಖೆಗಳು ಇಂತಹ ಪ್ರಕರಣಗಳನ್ನು ತಡೆಗಟ್ಟುವ ಜವಾಬ್ದಾರಿ ಹೊಂದಿವೆ. ಆದರೆ ಯಾವ ಇಲಾಖೆಯೂ ಹೊಣೆಗಾರಿಕೆ ನಿಭಾಯಿಸುತ್ತಿಲ್ಲ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ನೀಡಿದ ಅಂಕಿಅಂಶಕ್ಕೂ ವಾಸ್ತವಕ್ಕೂ ತಾಳೆಯಾಗುವುದೇ ಇಲ್ಲ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯೂ ಸಮರ್ಪಕವಾಗಿಲ್ಲ. ಹೀಗೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುವ, ಅವರು ಬಾಲ್ಯವಿವಾಹಕ್ಕೆ ಒಳಗಾಗುವ ಅಪಾಯವಿದೆ ಎಂದರು.
ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಪಾಲನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ದಿನ ಮುನ್ನವೇ ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ವಿವಿಧೆಡೆ ಅವರು ಸಂಗ್ರಹಿಸಿ ಮಾಹಿತಿಗಳನ್ನು ಕೇಳಿ ಅಧಿಕಾರಿಗಳು ದಂಗಾದರು.
ಅವರು ಕೇಳಿದ ಹರಿತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕೆಲವರು ತಡವರಿಸಿದರು. ಕೆಲ ಅಧಿಕಾರಿಗಳು ವೃಥಾ ಮಾತನಾಡಿ ಮಂಗಳಾರತಿ ಮಾಡಿಸಿಕೊಂಡರು. ಮಕ್ಕಳ ರಕ್ಷಣೆ ವಿಷಯದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಕಳಪೆ ಆಹಾರ, ಹಾಸ್ಟೆಲ್‌ಗಳ ಅವ್ಯವಸ್ಥೆ ಬಗ್ಗೆ ಅಪರ್ಣಾ ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ್‌ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಬಾಬು ಅಂಜನಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net