

ನವದೆಹಲಿ: ಪ್ರಸ್ತುತ 2023-24 ಹಣಕಾಸು ವರ್ಷದಲ್ಲಿ ದೇಶದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, 40.7 ರಿಂದ 41.8 ಕೋಟಿಗೆ ತಲುಪುವ ನಿರೀಕ್ಷೆ ಇದೆ. 2024-25ನೇ ಹಣಕಾಸು ವರ್ಷದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು 8-11 ಪ್ರತಿಶತದಷ್ಟು ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಬಹುದಾಗಿದೆ. ಇದೇ ಅವಧಿಯಲ್ಲಿ ಆಯ್ದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಆದಾಯವು 15-17 ಪ್ರತಿಶತ ಏರಿಕೆಯಾಗಲಿದೆ.
ರೇಟಿಂಗ್ ಏಜೆನ್ಸಿ ಇಕ್ರಾ ಈ ಅಂದಾಜುಗಳನ್ನು ಗುರುವಾರ ಬಹಿಂಗಪಡಿಸಿದೆ.
ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ (2023-24 ಹಣಕಾಸು ವರ್ಷ) ದೇಶದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯು ಕೋವಿಡ್ ಪೂರ್ವದ ಮಟ್ಟಕ್ಕಿಂತಲೂ ಶೇಕಡಾ 10 ರಷ್ಟು ಹೆಚ್ಚಾಗಿದೆ. 2023-24 ಹಣಕಾಸು ವರ್ಷದಲ್ಲಿ ಈ ಸಂಖ್ಯೆಯು 37.64 ಕೋಟಿ ತಲುಪಿದೆ. ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣ ನಿರ್ವಾಹಕರ ಆದಾಯವು ವಾರ್ಷಿಕ ಆಧಾರದ ಮೇಲೆ 15-17 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಯ ಚೇತರಿಕೆಯು ಅತ್ಯುತ್ತಮವಾಗಿದೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ಭಾರತವು ಜಾಗತಿಕ ಪ್ರಯಾಣಿಕರ ದಟ್ಟಣೆಯ 4.2 ಪ್ರತಿಶತವನ್ನು ಹೊಂದಿದೆ. 2019ರ ಕ್ಯಾಲೆಂಡರ್ನಲ್ಲಿ ಇದು ಶೇಕಡಾ 3.8 ಇತ್ತು.
"ಕೋವಿಡ್ ಪೂರ್ವದ ಮಟ್ಟಕ್ಕೆ ಹೋಲಿಸಿದರೆ, 2023 ರಲ್ಲಿ ಜಾಗತಿಕ ಪ್ರಯಾಣಿಕರ ದಟ್ಟಣೆಯು ಕೇವಲ 96 ಪ್ರತಿಶತದಷ್ಟು ಚೇತರಿಸಿಕೊಂಡಿದೆ. ಆದರೆ, ಬಲವಾದ ಆರ್ಥಿಕ ಬೆಳವಣಿಗೆ ಮತ್ತು ಹೊಸ ವಿಮಾನ ನಿಲ್ದಾಣ ಮಾರ್ಗಗಳ ಸೇರ್ಪಡೆಯಿಂದಾಗಿ ಭಾರತೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಕೋವಿಡ್-ಪೂರ್ವ ಮಟ್ಟದ 106 ಪ್ರತಿಶತಕ್ಕೆ ಪುನಶ್ಚೇತನಗೊಂಡಿದೆ. ಭಾರತೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಜಾಗತಿಕ ಪ್ರವೃತ್ತಿಯನ್ನು ಮೀರಿಸುವ ನಿರೀಕ್ಷೆಯಿದೆ" ಎಂದು ಇಕ್ರಾದ ಕಾರ್ಪೊರೇ ಟ್ ರೇಟಿಂಗ್‌ನ ಉಪಾಧ್ಯಕ್ಷ ಮತ್ತು ಸೆಕ್ಟರ್ ಮುಖ್ಯಸ್ಥ ವಿನಯ್ ಕುಮಾರ್ ಜಿ. ಹೇಳಿದ್ದಾರೆ.