ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಳ; ಕಾರ್ಮಿಕರ ಕಲ್ಯಾಣ ಮಂಡಳಿ ಸಭೆ ಅನುಮೋದನೆ

bh
Published on

ಬೆಂಗಳೂರು: ಕಟ್ಟಡ ಕಾರ್ಮಿಕರು ಕ್ಯಾನ್ಸರ್, ಹೃದ್ರೋಗ ಚಿಕಿತ್ಸೆ ಪಡೆಯಲು ವೈದ್ಯಕೀಯ ವೆಚ್ಚ ಸಹಾಯಧನವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ಕಾರ್ಮಿಕ ಮಂಡಳಿ ಸಭೆ ತೀರ್ಮಾನಿಸಿತು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 43ನೇ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಆಯುಷ್ಮಾನ್ ಯೋಜನೆಯ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚದ ಪ್ರಯೋಜನ ಪಡೆಯುವ ಕಾರ್ಮಿಕರಿಗೆ 2 ಲಕ್ಷ ಟಾಪ್ ಅಪ್ ನೆರವು ನೀಡಲು ಸಭೆ ಅನುಮೋದನೆ ನೀಡಲಾಯಿತು.

ಧಾರವಾಡದಲ್ಲಿ ಸರ್ಕಾರ ನೀಡಿರುವ 6 ಎಕರೆ ಜಮೀನಿನಲ್ಲಿ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕರ ಗುಂಪು ಮನೆ ನಿರ್ಮಾಣ ಮಾಡಲು ಸಭೆ ಅನುಮೋದನೆ ನೀಡಿತು.

ಕಾರ್ಮಿಕರು ಸರ್ಕಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಕ್ಯಾಷ್ ಲೆಸ್ ಚಿಕಿತ್ಸೆ ಪಡೆಯಲು ಸಭೆ ಸಮ್ಮತಿಸಿತು. ಈ ಮೊದಲು ಚಿಕಿತ್ಸೆ ಪಡೆದವರು ಹಣ ಪಾವತಿಸಿ ಬಳಿಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮರಳಿ ಪಡೆಯಬೇಕಿತ್ತು. ಇನ್ನು ಮುಂದೆ ಕ್ಯಾಷ್ ಲೆಸ್ ಚಿಕಿತ್ಸೆ ಪಡೆಯಲು ಅವಕಾಶ ನೀಡಲು ಸಭೆ ಒಪ್ಪಿಗೆ ನೀಡಿದೆ.

ರಾಜ್ಯವ ವಿವಿಧೆಡೆ ಕೆಐಎಡಿಬಿ ನೀಡುವ ಜಾಗದಲ್ಲಿ ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ನಿರ್ಮಿಸಲು ಸಭೆ ಅನುಮೋದನೆ ನೀಡಿದೆ.

ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ

ಬೆಂಗಳೂರು ಹಾಗೂ ಧಾರವಾಡಗಳಲ್ಲಿ ಸ್ಕಿಲ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ವಿಸ್ಕೃತ ಯೋಜನಾ ವರದಿ ತಯಾರಿಸಲು ಸಭೆ ಒಪ್ಪಿಗೆ ಸೂಚಿಸಿದೆ.

ಮಂಡಳಿಯ ಸದಸ್ಯರಾದ ಎಚ್.ಜಿ.ರಮೇಶ್, ವಿಜಯ ಕುಮಾರ್ ಪಾಟೀಲ್, ಶ್ರೇಯಸ್ ಕುಮಾರ್ ಜೈನ್ , ಜಾನಿ, ಬಸಪ್ಪ, ಕವಿತಾ ರೆಡ್ಡಿ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಉಪ ಕಾರ್ಯದರ್ಶಿ ಸಂಗಪ್ಪ ಉಪಾಸೆ, ಜಂಟಿ ಕಾರ್ಮಿಕ ಆಯುಕ್ತ ಜಾನ್ಸನ್, ಕೇಂದ್ರ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕ್ರೆಡಾಯ್ ಹಾಗೂ ಬಿಬಿಎಂಪಿ ಪ್ರತಿನಿಧಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net