

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ವಿಶೇಷ ಭತ್ಯೆ ಮೊತ್ತವನ್ನು ಹೆಚ್ಚಳ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಡಿವೈಎಸ್ಪಿ ದರ್ಜೆ ಅಧಿಕಾರಿಗೆ ಪ್ರತಿದಿನ 7 ಸಾವಿರ ರೂ., ಇನ್ಸ್ಪೆಕ್ಟರ್ಗೆ 700 ರೂ., ಸಬ್ಇನ್ಸ್ಪೆಕ್ಟರ್ಗೆ 500 ರೂ., ಎಎಸ್ಐ, ಹೆಡ್ಕಾನ್ಸ್ಟೆಬಲ್, ಕಾನ್ಸ್ಟೆಬಲ್ಗೆ 500 ರೂ. ಮತ್ತು ಉಪಹಾರ ಭತ್ಯೆ 250 ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
2018ರ ಚುನಾವಣೆ ವೇಳೆ ಡಿವೈಎಸ್ಪಿಗೆ 5 ಸಾವಿರ ರೂ., ಇನ್ಸ್ಪೆಕ್ಟರ್ಗೆ 500 ರೂ. ಮತ್ತು ಉಳಿದವರಿಗೆ 350 ರೂ. ಮತ್ತು ಉಪಾಹಾರ ಭತ್ಯೆ 150 ರೂ. ನೀಡಲಾಗುತ್ತಿತ್ತು. ಇದನ್ನು 2023ನೇ ಸಾಲಿನ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಹೆಚ್ಚಳ ಮಾಡಲಾಗಿದೆ.
ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಸುರತವಾಗಿ ಮತ್ತು ಶಾಂತಿಯುತ ಮತದಾನ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಭಾವನೆಯನ್ನು ಪರಿಷ್ಕೃತ ಮಾಡಲಾಗಿದೆ. ಯಾವುದೇ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಪೊಲೀಸರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.