

ಶಿವಮೊಗ್ಗ: ಯೋಗ, ಧ್ಯಾನ, ಪ್ರಾಣಾಯಾಮವನ್ನು ಪ್ರತಿದಿನವೂ ಅಭ್ಯಾಸ ಮಾಡುವುದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗದಿಂದ ಆರೋಗ್ಯ ಸಂವರ್ಧನೆ, ಮಾನಸಿಕ ಪರಿಶುದ್ಧತೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದೊಂದಿಗೆ ಜೀವನ ಸಂಸ್ಕಾರ ಸಿದ್ಧಿಸುತ್ತದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಶಿವಮೊಗ್ಗದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಕಾರ್ಯಾಗಾರ ಹಾಗೂ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆತ್ಮಶುದ್ಧಿಯಿಂದ ಸಮಾಜ ಸುಧಾರಿಸಬಹುದು. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದನ್ನು ಕಲಿಯಬೇಕು. ಬಳಿಕ ಸಮಾಜವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಯೋಗ ತರಬೇತಿಯಿಂದ ಸ್ವಯಂ ನಿಯಂತ್ರಣ ಹಾಗೂ ಯೋಗ ಶಕ್ತಿ ನಮಗೆ ಲಭಿಸುತ್ತದೆ. ಮನಸ್ಸಿನ ಶಾಂತಿಗಾಗಿ ಯೋಗಾಭ್ಯಾಸ ಅವಶ್ಯಕ ಎಂದರು.
ಶಿವಮೊಗ್ಗದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕ ಶಶಿಭೂಷಣ್ ಶಾಸ್ತ್ರಿ ಮಾತನಾಡಿ, ಸಮರ್ಪಣಾ ಮನೋಭಾವದಿಂದ ಬದುಕಿನಲ್ಲಿ ಸಹಜವಾದ ಸಂತಸ ಅರಳುತ್ತದೆ. ಸಹಜ ಸಂತಸಕ್ಕೆ ಯೋಗಾಭ್ಯಾಸ ತಳಹದಿ. ಶರೀರದ ಜಡತ್ವಕ್ಕೆ ಮುಕ್ತಿ ಕೊಡುವುದೇ ಯೋಗ. ಪ್ರಾಣಾಯಾಮವು ಮಾನಸಿಕ ನಿಯಂತ್ರಣವನ್ನು ಸಾಧಿಸಲು ಸಹಕಾರಿ. ಧ್ಯಾನದಿಂದ ಶರೀರ ಮತ್ತು ಮನಸ್ಸು ಪರಿಶುದ್ಧವಾಗುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ಅತ್ಯುತ್ತಮ ಯೋಗ ಪ್ರದರ್ಶನ ನೀಡಿದ ಸಂಸ್ಥೆಯ ಸಿಬ್ಬಂದಿ ಬಿ.ಎಂ.ನವೀನ್‌ಕುಮಾರ್ ಮತ್ತು ದೀಪಾ ನಿಂಬೋಜಿ ಹಾಗೂ ಸಜಾಬಂಧಿಗಳಾದ ಕೃಷ್ಣಪ್ಪ, ಉದಯ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಯೋಗ ಶಿಕ್ಷಕ ಶಿವಬೀರಪ್ಪ ಮಾತನಾಡಿದರು. ಸಂಸ್ಥೆಯ ಕಚೇರಿ ಸಿಬ್ಬಂದಿ ಅಬ್ದುಲ್ ರಜಾಕ್ ಥಲಾಯತ್, ಸಜಾಬಂಧಿ ಕೃಷ್ಣಪ್ಪ ಮತ್ತು ಚಂದ್ರ ಹೆಮ್ಮಾಡಿ ಯೋಗ ತರಬೇತಿ ಶಿಬಿರದ ಕುರಿತು ಅನಿಸಿಕೆ ಹಂಚಿಕೊಂಡರು. ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಆರ್. ಶಿವಾಪೂರ, ಜೈಲರ್‌ಗಳಾದ ಜಿ.ಎಂ.ಮಹೇಶ್, ಎಸ್.ಎಸ್.ಅನಿಲ್‌ಕುಮಾರ್, ಶ್ರೀಶೈಲ ಕಟ್ಟಿಮನಿ, ಸಹಾಯಕ ಜೈಲರ್ ಎಸ್.ಬಿ.ತೋಟಗಿ, ಶಿಕ್ಷಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.