ಸಂಪಾದಕೀಯ| ಸೈಬರ್ ಸುರಕ್ಷತೆ ಹೆಚ್ಚಲಿ

Cyber Crime
Published on

ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿ ಮತ್ತು ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕದ ವಿಚಾರ ಮಾತ್ರವಲ್ಲದೆ ಈ ನಿಟ್ಟಿನಲ್ಲಿ ಸಂಬಂಧಿತ ವ್ಯವಸ್ಥೆ ಜಾಗೃತಗೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಧಾನಿ, ರಾಷ್ಟ್ರಪತಿ, ಸಿಜೆಐ ಸೇರಿ 10 ಸಾವಿರಕ್ಕೂ ಅಧಿಕ ಭಾರತೀಯರ ಮೇಲೆ ಚೀನಾ ಮೂಲದ ಐಟಿ ಕಂಪನಿ ಡಿಜಿಟಲ್ ಬೇಹುಗಾರಿಕೆ ನಡೆಸಿದ್ದ ವಿಚಾರ ಕೆಲ ದಿನಗಳ ಹಿಂದಷ್ಟೇ ಬಯಲುಗೊಂಡಿತ್ತು. ಈ ವಿಷಯ ಶುಕ್ರವಾರ ಸಂಸತ್ತಿನ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ಗೂಢಚಾರಿಕೆ ನಡೆಸಿರುವ ಆರೋಪವಿರುವ ಚೀನಾ ಕಂಪನಿಯ ಚಟುವಟಿಕೆಗಳ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ. ಕೇಂದ್ರ ಸೈಬರ್ ಸುರಕ್ಷತೆ ಕಾರ್ಯನಿರ್ದೇಶಕರಾದ ರಾಜೇಶ್ ಪಂತ್ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದ್ದು, 30 ದಿನಗಳ ಒಳಗೆ ಅದು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ‘ಭಾರತದಲ್ಲಿರುವ ಚೀನಾ ರಾಯಭಾರಿ ಜತೆ ಈ ಎಲ್ಲ ಬೆಳವಣಿಗೆಗಳ ಕುರಿತು ರ್ಚಚಿಸಲಾಗಿದೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಚೀನಾ ಕಂಪನಿ ನಿಜಕ್ಕೂ ಗೂಢಚಾರಿಕೆ ನಡೆಸಿದ್ದೇ ಆದಲ್ಲಿ, ಅದು ಅಕ್ಷಮ್ಯ. ಈ ಪ್ರಕರಣದ ಎಲ್ಲ ಆಯಾಮಗಳ ವಾಸ್ತವಗಳನ್ನು ತಿಳಿದುಕೊಳ್ಳಲು ಸಮಿತಿ ರಚಿಸಿರುವ ಕ್ರಮ ಸೂಕ್ತವಾಗಿಯೇ ಇದೆ.

ಈ ಮಧ್ಯೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಭಾರತದ ಮೇಲೆ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿತ್ತೆಂಬ ಆಘಾತಕಾರಿ ಸುದ್ದಿ ತಲ್ಲಣ ಮೂಡಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಸಂಗ್ರಹ ಕೇಂದ್ರವಾಗಿರುವ ರಾಷ್ಟ್ರೀಯ ಇನ್ಪಾರ್ವೆಟಿಕ್ ಸೆಂಟರ್ (ಎನ್​ಐಸಿ)ನ ಕಂಪ್ಯೂಟರ್ ಅನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹಿತ ದೇಶದ ಅನೇಕ ಗಣ್ಯರು ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಡೇಟಾ ಎನ್​ಐಸಿ ಸರ್ವರ್​ನಲ್ಲಿ ಸಂಗ್ರಹವಾಗಿರುವುದರಿಂದ ಆತಂಕ ಮೂಡಿದೆ. ಎನ್​ಐಸಿಯ 100 ಕಂಪ್ಯೂಟರ್​ಗಳ ಮೇಲೆ ಸೈಬರ್ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ ಸೈಬರ್ ಕಳ್ಳರು ಡೇಟಾವನ್ನು ಕಳ್ಳತನ ಮಾಡಿದ್ದಾರೆಯೇ? ಎಷ್ಟು ಡೇಟಾ ಸೋರಿಕೆಯಾಗಿದೆ ಎಂಬ ಕುರಿತು ಸ್ಪಷ್ಟ ಮಾಹಿತಿ ಸಿಗಬೇಕಿದೆ. ಈ ಕೃತ್ಯದ ಹಿಂದೆ ವಿದೇಶಿ(ಚೀನಾ) ವಂಚಕರ ಕೈವಾಡ ಇರುವ ಸಾಧ್ಯತೆ ಇದೆ ಎಂದೂ ಸೈಬರ್ ತಜ್ಞರು ಶಂಕಿಸಿದ್ದಾರೆ.

ಇಂಥ ಕೃತ್ಯಗಳು ರಾಷ್ಟ್ರೀಯ ಭದ್ರತೆಗೇ ಅಪಾಯಕಾರಿ. ಹಾಗಾಗಿ, ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತದ ಮಹತ್ವದ ಮಾಹಿತಿಗಳನ್ನು ಕದಿಯುವ ಪ್ರಯತ್ನ ವಿಧ್ವಂಸಕ ಶಕ್ತಿಗಳಿಂದ ನಡೆಯುತ್ತಲೇ ಇದೆ. ಒಂದೊಮ್ಮೆ ಮಹತ್ವದ ಮಾಹಿತಿ ಸೈಬರ್ ಕಳ್ಳರ ಪಾಲಾದರೆ ಅದರಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ. ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿರುವ, ಸಾಫ್ಟ್​ವೇರ್​ಗಳನ್ನು ವಿದೇಶಗಳಿಗೆ ರಫ್ತು ಮಾಡುವ ಭಾರತ ಸೈಬರ್ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net