ಸಂಪಾದಕೀಯ|ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಅರಿವು ಹೆಚ್ಚಲಿ

Sex Ratio
Published on

ಸಮಾಜ ಎಲ್ಲ ರಂಗಗಳಲ್ಲೂ ಭೌತಿಕ ಅಭಿವೃದ್ಧಿ ಸಾಧಿಸುತ್ತಿದ್ದರೂ, ಕೆಲ ಹಳೆಯ ಮನೋಭಾವವನ್ನು ಪೂರ್ಣವಾಗಿ ಬದಲಿಸಿಕೊಂಡಿಲ್ಲ ಎಂಬುದು ಶೋಚನೀಯ ಸಂಗತಿ. ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಹೆಗ್ಗುರುತು ಮೂಡಿಸುತ್ತಿದ್ದು, ಪ್ರತಿಭೆ, ದಕ್ಷತೆಯಿಂದಲೇ ಗುರುತಿಸಿಕೊಂಡಿದ್ದಾಳೆ. ಉದ್ಯಮದಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ, ಆಟೋ ಚಾಲಕಿಯಿಂದ ಹಿಡಿದು ಮಾಹಿತಿ-ತಂತ್ರಜ್ಞಾನ ಕ್ಷೇತ್ರದವರೆಗೆ ಎಲ್ಲ ಕಡೆ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದಾಳೆ. ಹೀಗಿದ್ದರೂ, ‘ಹೆಣ್ಣು ಹೊರೆ’ ಎಂಬ ಭಾವನೆ ತೀವ್ರವಾಗಿರುವುದು ಮತ್ತು ಇಂಥ ತಪು್ಪಗ್ರಹಿಕೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಪೆಟ್ಟು ಕೊಡುತ್ತಿರುವುದು ಕಹಿಸತ್ಯ. ಹೆಣ್ಣುಭ್ರೂಣ ಹತ್ಯೆ ವಿರುದ್ಧ ಅರಿವು, ಹೆಣ್ಣುಮಗುವಿಗಾಗಿ ಸುರಕ್ಷಿತ ಹಾಗೂ ಆರೋಗ್ಯಯುತ ವಾತಾವರಣ ಸೃಷ್ಟಿ, ಹೆಣ್ಣಿಗೆ ಶಿಕ್ಷಣ ನೀಡುವ ಅಗತ್ಯದ ಬಗ್ಗೆ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದರೂ, ಜನರ ಮನೋಭಾವ ಬದಲಾಗದೆ ಈ ಯಾವುದೇ ಪ್ರಯತ್ನಗಳು ಸಫಲಗೊಳ್ಳಲಾರವು.

2020ರ ವರದಿ ಪ್ರಕಾರ ದೇಶದ ಗ್ರಾಮೀಣಭಾಗದಲ್ಲಿ ಲಿಂಗಾನುಪಾತ ಇಳಿಕೆ ಕಂಡಿದೆ. ಅಂದರೆ, ಗ್ರಾಮೀಣ ಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿ ನಡೆಯುತ್ತಿದ್ದು, ಭಾರತದ ಲಿಂಗಾನುಪಾತದ ಸರಾಸರಿ 1000 ಗಂಡುಮಕ್ಕಳಿಗೆ 924 ಹೆಣ್ಣುಮಕ್ಕಳು. ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ 918. ತಮಿಳುನಾಡಿನ ನಗರ ಭಾಗದಲ್ಲಿ ಸಾವಿರ ಗಂಡುಮಕ್ಕಳ ಅನುಪಾತದಲ್ಲಿ 939 ಹೆಣ್ಣುಮಕ್ಕಳ ಜನನವಾಗುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 901. ಕರ್ನಾಟಕದ ಸ್ಥಿತಿ ಇದಕ್ಕೆ ವ್ಯತಿರಿಕ್ತ. ಇಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಣ್ಣುಮಕ್ಕಳ ಜನನವಾಗುತ್ತಿದ್ದರೆ (951), ನಗರಪ್ರದೇಶದಲ್ಲಿ ಕಡಿಮೆ (935). ರಾಜಸ್ಥಾನ, ಆಂಧ್ರಪ್ರದೇಶದಲ್ಲೂ ಅನುಪಾತದ ಅಂತರ 30ಕ್ಕೂ ಹೆಚ್ಚಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಇತರ ಹಲವು ರಾಜ್ಯಗಳಲ್ಲೂ ಹೆಣ್ಣುಮಕ್ಕಳ ಜನನ ಸಂಖ್ಯೆ ಕಡಿಮೆಯಾಗಿದೆ. ಇದನ್ನೂ ಓದಿ: ನಿಮಗೆ ವಯಸ್ಸಾಗುತ್ತಿದೆಯೇ? ಹಾಗಿದ್ದರೆ ವಿಟಮಿನ್​-ಡಿಯಿಂದಲೂ ತಿಳಿಯಬಹುದು ಭವಿಷ್ಯ..!

ಕುಟುಂಬ, ಸಮಾಜವನ್ನು ಕಟ್ಟುವಲ್ಲಿ ಹೆಣ್ಣಿನ ಶ್ರಮ, ತ್ಯಾಗ, ಬದ್ಧತೆ ಅಸಾಧಾರಣ. ಆದರೆ, ಹೆಣ್ಣನ್ನು ಹೊರೆ ಎಂದು ಭಾವಿಸಿ, ಹುಟ್ಟುವ ಮುಂಚೆಯೇ ಇಲ್ಲವಾಗಿಸುತ್ತಿರುವುದು ವಿಪರ್ಯಾಸದ ಸಂಗತಿ. ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ಕೃತ್ಯ ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಹೆಣ್ಣಿನ ಸಂಖ್ಯೆ ಕಡಿಮೆಯಾದಲ್ಲಿ ಅದರಿಂದ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಲಿಂಗಾನುಪಾತದ ಸಮತೋಲನ ಕಾಪಾಡಿಕೊಳ್ಳಬೇಕು ಎಂಬ ವಿಷಯತಜ್ಞರ ಅಭಿಪ್ರಾಯವನ್ನು ಕಡೆಗಣಿಸಿಕೊಂಡೇ ಬರಲಾಗಿದೆ. ಈ ಸಮಸ್ಯೆ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಮದುವೆಗೆ ಹೆಣ್ಣು ಸಿಗದೆ ಕೆಲವೆಡೆಯ ಹುಡುಗರು ದೂರದ ಈಶಾನ್ಯ ರಾಜ್ಯಗಳ, ಜಮ್ಮು-ಕಾಶ್ಮೀರದ ವಧುಗಳೊಂದಿಗೆ ಸಪ್ತಪದಿ ತುಳಿದ ನಿದರ್ಶನಗಳನ್ನು ಕಂಡಿದ್ದೇವೆ. ಲಿಂಗಾನುಪಾತದ ಅಸಮತೋಲನ ನಿವಾರಣೆಗೆ ಸರ್ಕಾರದ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆಯಾದರೂ, ಭ್ರೂಣ ಹತ್ಯೆ ತಡೆ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜನರಲ್ಲಿ ಅರಿವು ಹೆಚ್ಚಿಸುವಂಥ ಪ್ರಯತ್ನಗಳೂ ಹೆಚ್ಚಬೇಕು. ಆಗಲೇ ಪರಿಸ್ಥಿತಿ ಸುಧಾರಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net