

ಕಟ್ಟೆಮಳಲವಾಡಿ: ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ.
ಗ್ರಾಮದ ಎಲ್ಲ ಸಮುದಾಯದ ಬೀದಿಗಳಲ್ಲಿ ಕಸದ ರಾಶಿ ಬೆಳೆಯುತ್ತಿವೆ. ಗ್ರಾಮ ಪಂಚಾಯಿತಿ ಕಚೇರಿ ಪಕ್ಕದ ಓಣಿ ರಸ್ತೆಯ ಚರಂಡಿಯಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ನಂದಿ ಸರ್ಕಲ್‌ನಿಂದ ಸಿಲುಬುಕೆರೆಗೆ ಹೋಗುವ ರಸ್ತೆಯಲ್ಲಿ ಗರಡಿ ಮನೆ ಬೀದಿಯಿಂದ ಬರುವ ಚರಂಡಿ ನೀರು ಕಟ್ಟಿಕೊಂಡಿದ್ದು, ನೀರು ಹರಿಯಲು ರಸ್ತೆ ಅಗೆಯಲಾಗಿತ್ತು. ಆದರೆ ಆ ಗುಂಡಿಯನ್ನು ಮುಚ್ಚದೆ ನಿರ್ಲಕ್ಷೃ ವಹಿಸಲಾಗಿದೆ. ಇದರಿಂದ ಈ ರಸ್ತೆಯನ್ನು ಅವಲಂಬಿಸಿರುವ ನಿವಾಸಿಗಳು, ದನ-ಕರುಗಳು, ಬೈಕ್ ಸವಾರರು, ಎತ್ತಿನ ಗಾಡಿಗಳು ಸಂಚರಿಸಲು ತೊಂದರೆಯಾಗಿದೆ.
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ, ಜನರ ಆರೋಗ್ಯ ರಕ್ಷಿಸಬೇಕಾದ ಗ್ರಾಮ ಪಂಚಾಯಿತಿ ಕಣ್ಮುಚ್ಚಿ ಕುಳಿತಿದೆ. ಇದರಿಂದ ಮನೆಗಳ ಮುಂದೆ, ಬೀದಿ ಮಧ್ಯೆ, ರಸ್ತೆ ಬದಿಗಳಲ್ಲಿ ಕಸದ ರಾಶಿಗಳೇ ಬೆಳೆದಿವೆ. ಚರಂಡಿಗಳನ್ನು ಸ್ವಚ್ಛಗೊಳಿಸದ ಪರಿಣಾಮ ದುರ್ವಾಸನೆ ಬೀರುತ್ತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಮನೆಯ ಮುಂದೆ ಚರಂಡಿ ತೆಗೆದು, ಕಸ ಹಾಕಿ ತಿಂಗಳಾಯ್ತು. ಇದರಿಂದ ದುರ್ವಾಸನೆ ಬರುತ್ತಿದ್ದು, ಮನೆಯಲ್ಲಿ ಕುಳಿತು ಊಟ ಮಾಡಲೂ ಆಗುತ್ತಿಲ್ಲ. ಜತೆಗೆ, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ, ಸ್ವಚ್ಛತೆ ಕಾಪಾಡಬೇಕು ಎಂದು ನಿವಾಸಿ ತಾಯಮ್ಮ ಹೇಳುತ್ತಾರೆ.
ಕರೊನಾ ಸೋಂಕು ಹರಡುವಿಕೆಯ ಭಯದಲ್ಲಿ ಜನರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮದಲ್ಲಿ ಸ್ವಚ್ಛತೆಯೂ ಇಲ್ಲವಾಗಿದೆ. ಬೇಡದ ಕೆಲಸಗಳಿಗೆ ಖರ್ಚು ಮಾಡಿ ಲೆಕ್ಕ ತೋರಿಸುವ ಗ್ರಾ.ಪಂ. ಅಧಿಕಾರಿಗಳು ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಗ್ರಾ.ಪಂ. ಸದಸ್ಯ ಪ್ರೇಮ್‌ಪ್ರಸಾದ್ ಒತ್ತಾಯಿಸಿದ್ದಾರೆ.
ಚರಂಡಿಗೆ ಅಳವಡಿಸಿದ್ದ ಪೈಪ್ ಕಟ್ಟಿಕೊಂಡಿದ್ದು, ನೀರು ಹೋಗಲು ರಸ್ತೆ ಅಗೆದು ಬೇರೆ ಚರಂಡಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಅಲ್ಲಿಗೆ ಡಕ್ ಹಾಕಲು ವಾರದ ಹಿಂದೆಯೇ ಕ್ರಿಯಾ ಯೋಜನೆ ಆಗಿದ್ದು, ಕೆಲಸ ಪ್ರಾರಂಭಿಸಿಲ್ಲ. ಶೀಘ್ರದಲ್ಲಿಯೇ ಚರಂಡಿ ಹಾಗೂ ಡಕ್ ಕಾಮಗಾರಿ ಮುಗಿಸಿ, ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
ಸ್ವಾಮಿನಾಯ್ಕ, ಪಿಡಿಒ