ಆದಾಯ ತೆರಿಗೆ ಮಿತಿ 5 ಲಕ್ಷ ರೂ.ಗೆ?; ಮುಂದಿನ ಬಜೆಟ್​ನಲ್ಲಿ ಘೋಷಣೆ ನಿರೀಕ್ಷೆ

IT
Published on

ನವದೆಹಲಿ: ಮುಂದಿನ ಆರ್ಥಿಕ ವರ್ಷದ ಬಜೆಟ್​ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ವಾರ್ಷಿಕ 5 ಲಕ್ಷ ರೂಪಾಯಿಗೆ ಏರಿಸುವ ಸಾಧ್ಯತೆ ಇದೆ. ಕಳೆದ ಎರಡು ಸಾಲಿನಿಂದ ಆದಾಯ ತೆರಿಗೆ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಮಾಡದ ಸರ್ಕಾರ, ಹಾಲಿ ಇರುವ 2.50 ಲಕ್ಷ ರೂ. ಮಿತಿಯನ್ನು ದುಪ್ಪಟ್ಟುಗೊಳಿಸಲು ಬಯಸಿದೆ ಎಂದು ದೆಹಲಿ ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.

ಹಣದುಬ್ಬರದ ಪರಿಣಾಮ ಬೆಲೆ ಏರಿಕೆ ಆಗಿರುವುದರಿಂದ ಜೀವನ ದುರ್ಬರವಾಗಿದೆ. ಆದರೆ, ಶ್ರೀಸಾಮಾನ್ಯರಿಗೆ ವಿಶೇಷವಾಗಿ ಮಧ್ಯಮ ವರ್ಗದ ವೇತನದಾರರಿಗೆ ತೆರಿಗೆ ಹೊರೆ ಇಳಿದಿಲ್ಲ. ವೈಯಕ್ತಿಕ ಆದಾಯ ತೆರಿಗೆಯ ಮಿತಿ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕಳೆದ ವರ್ಷವೇ ಕೇಳಿ ಬಂದಿತ್ತು ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣ ಸರ್ಕಾರ ಯಾವುದೇ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಇದೇ ಶ್ರೇಣಿಯಲ್ಲಿ ಹಳೆಯ ವಿಧಾನ ಮತ್ತು ಹೊಸ ವಿಧಾನ ಎಂಬ ಆಯ್ಕೆಯನ್ನು ಸರ್ಕಾರ ನೀಡಿತ್ತು. ಅದೂ ಅಲ್ಲದೆ, 2024ರಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಮುಂದಿನ ಫೆಬ್ರವರಿಯಲ್ಲಿ ಮಂಡನೆಯಾಗುವ ಬಜೆಟ್ ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಪೂರ್ಣಪ್ರಮಣದ ಆಯವ್ಯಯ ಆಗಿರಲಿದೆ. ಹೀಗಾಗಿ ಈ ಬಜೆಟ್​ನಲ್ಲೇ ತೆರಿಗೆ ಮಿತಿ ಏರಿಕೆ ಕಾಣಲಿದೆ ಎಂಬ ರ್ತಾಕ ವಿವರಣೆಯನ್ನು ಮೂಲಗಳು ನೀಡಿವೆ.

ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚಿಗೆ ಆದಾಯ ಇರುವವರಿಗೆ ಆದಾಯ ತೆರಿಗೆ ಕಾಯ್ದೆಯ 80ಸಿ ಮತ್ತು 80ಡಿ ಸೆಕ್ಷನ್ ಅನ್ವಯ (ಉಳಿತಾಯ ಅಥವಾ ಸಾಮಾಜಿಕ ಕಾರ್ಯಗಳಿಗೆ ದೇಣಿಗೆ) ಕೆಲವು ವಿನಾಯಿತಿ ನೀಡಲಾಗಿದೆ. ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿದರೆ ಈ ವಿನಾಯಿತಿಯಲ್ಲಿ ಕೆಲವು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರಂಭಿಸಿರುವ ಬಜೆಟ್ ಪೂರ್ವತಯಾರಿ ಸಭೆಗಳಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳದ ಬಗ್ಗೆ ಸಲಹೆಗಳು ಬಂದಿವೆ ಎಂದು ಮೂಲಗಳು ಹೇಳಿವೆ.

ನೇರ ತೆರಿಗೆ ಸಂಗ್ರಹ ಶೇ. 24 ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್​ನಿಂದ ನವೆಂಬರ್ 11ರವರೆಗೆ ನೇರ ತೆರಿಗೆ ಸಂಗ್ರಹದಲ್ಲಿ ಶೇ. 24.26 ಪ್ರಗತಿ ಆಗಿದೆ. ಈ ಅವಧಿಯಲ್ಲಿ 8.77 ಲಕ್ಷ ಕೋಟಿ ರೂ. ಕರ ಸಂಗ್ರಹ ಆಗಿದೆ. ಈ ಸಾಲಿನ ಬಜೆಟ್ ಅಂದಾಜಿನಲ್ಲಿ ಶೇ. 61.79ರಷ್ಟು ತೆರಿಗೆ ಸಂಗ್ರಹ ಈಗಾಗಲೇ ಆಗಿದೆ. ತೆರಿಗೆ ಸಂಗ್ರಹವು ದೇಶದ ಆರ್ಥಿಕ ಬೆಳವಣಿಗೆಯ ದ್ಯೋತಕ ಆಗಿದ್ದು, ನೇರ ತೆರಿಗೆ ಸಂಗ್ರಹದಲ್ಲಿ ಸುಸ್ಥಿರವಾದ ಪ್ರಗತಿ ಆಗುತ್ತಿದೆ. ಕಳೆದ ಏಪ್ರಿಲ್​ನಿಂದ ನವೆಂಬರ್​ವರೆಗೆ 2.15 ಲಕ್ಷ ಕೋಟಿ ರೂಪಾಯಿ ಮರುಪಾವತಿ ಆಗಿದ್ದು, ಶೇ. 66.92ಕ್ಕ್ಟೆ ಏರಿಕೆ ಆಗಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ. 2022-23ನೇ ಸಾಲಿನಲ್ಲಿ 14.20 ಲಕ್ಷ ರೂ. ನೇರ ತೆರಿಗೆಯ ಅಂದಾಜನ್ನು ಬಜೆಟ್​ನಲ್ಲಿ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ (2021-22) 14.10 ಲಕ್ಷ ಕೋಟಿ ರೂ. ನೆರ ತೆರಿಗೆ ಕರ ಶೇಖರ ಆಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ. ನವೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ ಶೇ. 11ರಷ್ಟು ಏರಿಕೆ ಕಂಡಿದ್ದು, 1.46 ಲಕ್ಷ ಕೋಟಿ ರೂ. ತಲುಪಿದೆ. ಕಳೆದ 9 ತಿಂಗಳಿಂದ ಜಿಎಸ್​ಟಿ ಸಂಗ್ರಹ 1.40 ಲಕ್ಷ ಕೋಟಿ ರೂ.ಗೆ ಅಧಿಕ ಇದೆ. ಏಪ್ರಿಲ್​ನಲ್ಲಿ 1.68 ಲಕ್ಷ ಕೋಟಿ ರೂ.ಗೆ ಮಟ್ಟಿದ್ದು, ಸಾರ್ವಕಾಲಿಕ ಅಧಿಕ ಸಂಗ್ರಹ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net