

ತೆಲಂಗಾಣ: ಒಂದು ವರ್ಷ ಒಂಬತ್ತು ತಿಂಗಳ ಹುಡುಗ ಹೆಚ್ಚೆಂದರೆ ಏನು ಮಾಡಬಹುದು?! ಎಂದುಕೊಳ್ಳುವುದು ಸಹಜ. ಆದರೆ ಒಂದೂಮುಕ್ಕಾಲು ವರ್ಷದ ಒಬ್ಬ ಹುಡುಗ ಇಲ್ಲಿ ಅಬ್ಬಬ್ಬಾ ಎಂಬಂಥ ಸಾಧನೆ ಮಾಡಿದ್ದಾನೆ.
ತೆಲಂಗಾಣದ ಆದಿತ್ ವಿಶ್ವನಾಥ್ ಗೌರಿಶೆಟ್ಟಿ ಎಂಬ ಈ ಹುಡುಗ ತನ್ನ ಅಗಾಧ ನೆನಪಿನ ಶಕ್ತಿಯಿಂದಾಗಿ ಒಂದು ವಿಶ್ವ ದಾಖಲೆ ಸೇರಿ ಐದು ದಾಖಲೆಗಳನ್ನು ಗಳಿಸಿದ್ದಾನೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಜತೆಗೆ ರಾಷ್ಟ್ರಮಟ್ಟದ ಇನ್ನೆರಡು ದಾಖಲೆಗೂ ಪಾತ್ರನಾಗಿದ್ದಾನೆ. ಕಾರ್ ಲೋಗೋ, ಬಣ್ಣಗಳು, ದೇವರು, ಇಂಗ್ಲಿಷ್ ವರ್ಣಮಾಲೆ, ಸಾಕು ಹಾಗೂ ಕಾಡುಪ್ರಾಣಿಗಳು, ಅಂಗಾಂಗಗಳು, ಧ್ವಜಗಳು, ಹಣ್ಣುಗಳು ಸೇರಿ ಹಲವು ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾನೆ.
ಸ್ನೇಹಿತ ಹಾಗೂ ಅರುಣ್ ಸಾಯಿ ಗೌರಿಶೆಟ್ಟಿ ದಂಪತಿಯ ಈ ಪುತ್ರನ ಸಾಮರ್ಥ್ಯವನ್ನು ಮೊದಲು ಗುರುತಿಸಿದ್ದು ಅಜ್ಜ-ಅಜ್ಜಿ. ಒಂದು ದಿನ ಪೂಜೆ ವೇಳೆ ಸಾಯಿಬಾಬಾ ಮತ್ತು ವೆಂಕಟೇಶ್ವರ ಸ್ವಾಮಿಯ ಫೋಟೋಗಳನ್ನು ಗುರುತಿಸಿದ ಆದಿತ್ಗೆ ಅಜ್ಜಿ, ಮತ್ತಷ್ಟು ದೇವರ ಫೋಟೋಗಳನ್ನು ತೋರಿಸಿದ್ದರು. ಅದನ್ನೂ ಆತ ನೋಡಿ ಗುರುತಿಸಿ ನೆನಪಿನಲ್ಲಿ ಇಟ್ಟುಕೊಂಡಿದ್ದ.
ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುವಾಗ ರಾಷ್ಟ್ರಧ್ವಜ ನೋಡಿ ಆದಿತ್ ಗೌರವ ಸೂಚಿಸಿದ್ದ. ಬಳಿಕ ಆತನಿಗೆ ಮತ್ತಷ್ಟು ದೇಶಗಳನ್ನು ತೋರಿಸಿದಾಗ ಆತ ಅದನ್ನು ನೋಡಿ ನೆನಪಿನಲ್ಲಿಟ್ಟು ಕೊಂಡ ಎನ್ನುತ್ತಾರೆ ಪಾಲಕರು. (ಏಜೆನ್ಸೀಸ್)