ಏಳು ಮಠ ಒಗ್ಗೂಡಿಸಿ ನೇಕಾರ ಗುರುಪೀಠ

Nekara
ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದಾಸಿಮಯ್ಯ ಭಾವಚಿತ್ರಕ್ಕೆ ಬಾಗಲಕೋಟೆಯ ಶ್ರೀ ಘನಲಿಂಗೇಶ್ವರ ಸ್ವಾಮೀಜಿ, ಶಾಸಕ ಉದಯ ಬಿ. ಗರುಡಾಚಾರ್, ಎಂಎಲ್​ಸಿ ಗೋಪಿನಾಥ ರೆಡ್ಡಿ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್, ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
Published on

ಬೆಂಗಳೂರು: ರಾಜ್ಯದಲ್ಲಿ ನೇಕಾರರ ಸಮುದಾಯದ 7 ಮಠಗಳ ಸ್ವಾಮೀಜಿಗಳನ್ನು ಒಗ್ಗೂಡಿಸಿ ಒಂದು ನೇಕಾರ ಗುರುಪೀಠ ಸ್ಥಾಪಿಸಲಾಗುವುದು ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ನೇಕಾರ ಸಮುದಾಯ ಎಲ್ಲೆಡೆ ಹಂಚಿಕೆ ಆಗಿದ್ದು, ಒಟ್ಟು 7 ಮಠಗಳಿವೆ.

ಆದರೆ, ನಮ್ಮ ಮಠಗಳಿಗೆ ಈವರೆಗೆ ಒಬ್ಬ ಮುಖ್ಯಮಂತ್ರಿಯೂ ಭೇಟಿ ನೀಡಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ. ಈ ನಿಟ್ಟಿನಲ್ಲಿ 7 ಮಠಗಳ ಸ್ವಾಮೀಜಿಗಳನ್ನು ಒಪ್ಪಿಸಿ ನೇಕಾರ ಸಮುದಾಯಗಳ ಗುರುಪೀಠವೊಂದನ್ನು ಸ್ಥಾಪಿಸಬೇಕಿದೆ. ಈ ಬಗ್ಗೆ ಈಗಾಗಲೆ ಮಠಾಧ್ಯಕ್ಷರ ಬಳಿ ಚರ್ಚೆ ಮಾಡಲಾಗಿದೆ. ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ ನೇಕಾರರ ಭವನ ಸ್ಥಾಪಿಸುವ ಜವಾಬ್ದಾರಿಯನ್ನು ಮಾಜಿ ಮೇಯರ್ ಹರೀಶ್ ಅವರಿಗೆ ವಹಿಸಲಾಗುತ್ತಿದೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಒಕ್ಕೂಟದಿಂದಲೂ ಒತ್ತಡ ಹೇರಲಾಗುತ್ತದೆ ಎಂದು ಹೇಳಿದರು.

ಜಿಲ್ಲಾವಾರು ಜವಳಿ ಇಲಾಖೆಗಳಿದ್ದು, ನೇಕಾರ ಬಂಧುಗಳಿಗೆ ಇದರ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಮುಂದಿನ ವರ್ಷಗಳಲ್ಲಿ ಅದ್ದೂರಿಯಾಗಿ ದೇವರ ದಾಸಿಮಯ್ಯ ಜಯಂತಿ ಆಚರಿಸಲು ಎಲ್ಲರನ್ನೂ ಸೇರಿಸಿಕೊಂಡು ಚರ್ಚೆ ಮಾಡಿ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಹೋದಾಗ ನೇಕಾರ ಬಂಧುಗಳು ಆತ್ಮೀಯತೆಯಿಂದ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವೈಯಕ್ತಿಕವಾಗಿ ಹಾಗೂ ಒಕ್ಕೂಟದ ಪರವಾಗಿ ಒತ್ತಾಯಿಸಲಾಗುವುದು. | ಉದಯ ಬಿ. ಗರುಡಾಚಾರ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net