

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕಾತಿ ಪ್ರಕ್ರಿಯೆ ನಡೆಸುವಾಗ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನೂ (ಸಿಜೆಐ) ಸೇರಿಸಿಕೊಳ್ಳಿ. ಇದರಿಂದ ನೇಮಕಾತಿ ಹೆಚ್ಚು ಸ್ವತಂತ್ರವಾಗಿ ನಡೆಯುವುದನ್ನು ಖಾತ್ರಿಪಡಿಸಬಹುದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಆಡಳಿತ ಪಕ್ಷಗಳು ಅಧಿಕಾರದಲ್ಲಿ ಶಾಶ್ವತವಾಗಿರಲು, ಹಾಲಿ ವ್ಯವಸ್ಥೆ ಮುಂದುವರಿಸಲು ‘ಹೌದಪ್ಪ’ ಎನ್ನುವ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗೆ ನೇಮಿಸುತ್ತವೆ. ಆದರೆ ದಕ್ಷರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ನೇಮಕಾತಿ ವೇಳೆಯಲ್ಲೇ ಸಂಸ್ಥೆಯ ಸ್ವಾಯತ್ತೆಗೆ ಧಕ್ಕೆ ಆಗುವುದಿಲ್ಲ ಎಂಬುದನ್ನು ಖಾತ್ರಿಪಡಿಸುವಂತಹ ಪರಿಶೀಲನಾ ಕ್ರಿಯೆಗಳು ಸಮರ್ಪಕವಾಗಿ ನಡೆಯಬೇಕು. ಈ ಪ್ರಕ್ರಿಯೆಯಲ್ಲಿ ಸಿಜೆಐ ಒಳಗೊಳ್ಳುವುದರಿಂದ ಚುನಾವಣಾ ಸಂಸ್ಥೆಯ ಸ್ವಾಯತ್ತೆಗೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ. ಜತೆಗೆ, ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದಿರುವ ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಹಾಜರುಪಡಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತು. ಚುನಾವಣಾ ಆಯುಕ್ತ (ಇಸಿ) ಮತ್ತು ಸಿಇಸಿ ನೇಮಕಾತಿಗೂ ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆ ರೂಪಿಸಬೇಕು ಎಂದು ಕೋರಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಪೀಠ ಕೈಗೊಂಡಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಪೀಠದ ಸದಸ್ಯರು.
ಕೇಂದ್ರದ ವಾದ ಏನು?: 1991ರ ‘ಚುನಾವಣಾ ಆಯೋಗದ ಆಯುಕ್ತರ ಸೇವಾ ಷರತ್ತಿನ ನಿಯಮ ಮತ್ತು ಅವರ ಕರ್ತವ್ಯ’ ಕಾಯ್ದೆ ಪ್ರಕಾರ ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆ. ಅಲ್ಲಿನ ಉನ್ನತ ಅಧಿಕಾರಿಗಳ ನೇಮಕ, ವೇತನ ಮತ್ತು ಸೇವಾವಧಿಯು ಈ ಕಾಯ್ದೆಯಂತೆ ನಡೆಯುತ್ತದೆ. ಇದರಲ್ಲಿ ಕೋರ್ಟ್ ಹಸ್ತಕ್ಷೇಪ ಸಲ್ಲ. ಉನ್ನತ ಹುದ್ದೆಗಳು ಖಾಲಿ ಉಳಿದಿದ್ದು, ದೀರ್ಘ ಕಾಲದಿಂದ ನೇಮಕ ನಡೆಯದಿದ್ದರೆ, ಅನಿಯಂತ್ರಿತ ಪ್ರಕ್ರಿಯೆಗಳಾಗುತ್ತಿವೆ ಎಂದಾಗ ಕೋರ್ಟ್ ಮಧ್ಯಪ್ರವೇಶಿಸಬಹುದು ಎಂದು ಸರ್ಕಾರ ವಾದಿಸಿತು.
ಸಿಇಸಿ ಮತ್ತು ಇಸಿ ನೇಮಕಾತಿ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಿರಿಯ ಅಧಿಕಾರಿಗಳನ್ನು ಪರಿಗಣಿಸಲಾಗುತ್ತದೆ. ಇಸಿಗಳಲ್ಲಿ ಹಿರಿಯರಾದವರು ಸಿಇಸಿ ಆಗುತ್ತಾರೆ ಎಂದು ನೇಮಕಾತಿ ವಿಧಾನವನ್ನು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ವಿವರಿಸಿದರು. ಹೀಗಾಗಿ ನೇಮಕಾತಿ ವಿವೇಚನಾರಹಿತವಾಗಿ ನಡೆಯುತ್ತದೆ ಎನ್ನಲಾಗದು ಸಿಇಸಿ ಹುದ್ದೆಗೆ ಅರ್ಹರನ್ನು ಕೇಂದ್ರ ಸಂಪುಟ ಶಿಫಾರಸು ಮಾಡುತ್ತದೆ. ಹಾಲಿ ವ್ಯವಸ್ಥೆಯಲ್ಲಿ ಸಿಇಸಿ ಮತ್ತು ಇಬ್ಬರು ಇಸಿಗಳಿದ್ದಾರೆ ಎಂದ ಅವರು, ನೇಮಕಾತಿಗೆ ಕೊಲಿಜಿಯಂ ಮಾದರಿ ವ್ಯವಸ್ಥೆಯನ್ನು ವಿರೋಧಿಸಿದರು.
ಸಿಇಸಿ ಶಕ್ತರೇ?: ಒಂದೊಮ್ಮೆ ಪ್ರಧಾನಿ ವಿರುದ್ಧವೇ ಕ್ರಮ ಕೈಗೊಳ್ಳಬೇಕಿದ್ದ ಪಕ್ಷದಲ್ಲಿ ಸಿಇಸಿ ಅದನ್ನು ಮಾಡಲು ಶಕ್ತರೆ? ಏಕೆಂದರೆ ಈ ಹುದ್ದೆಯ ನೇಮಕಾತಿಯನ್ನು ಅನುಮೋದಿಸುವವರು ಪ್ರಧಾನಿ ಮತ್ತು ಸಂಪುಟ. ಆದ್ದರಿಂದ ಈ ಪ್ರಕ್ರಿಯೆಯನ್ನು ಬದಲಾಯಿಸುವ ಧೈರ್ಯ ತೋರಬೇಕಿದೆ. ಗುಣವಂತ ವ್ಯಕ್ತಿಯಷ್ಟೆ ನೇಮಕವಾದರೆ ಸಾಲದು, ಆ ಗುಣಾತಿಶಯವು ಸ್ವಾತಂತ್ರ್ಯ ಪೂರ್ಣವಾಗಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.
ನ್ಯಾಯಪೀಠ ಹೇಳಿದ್ದೇನು?: ಚುನಾವಣಾ ಆಯೋಗದ ಉನ್ನತ ಹುದ್ದೆಗಳಿಗೆ ಸಂಬಂಧಿಸಿದ 1991ರ ಕಾಯ್ದೆಯು ಹೆಸರೇ ಸೂಚಿಸುವಂತೆ ಸೇವಾ ನಿಯಮಗಳನ್ನು ಸ್ಪಷ್ಟಪಡಿಸುತ್ತದೆ ಹೊರತು ಆಯ್ಕೆ ಪ್ರಕ್ರಿಯೆಯ ದಕ್ಷತೆ ಕುರಿತು ರ್ಚಚಿಸುವುದಿಲ್ಲ. ಉದಾಹರಣೆಗೆ ಸರ್ಕಾರದ ಮನಸ್ಥಿತಿಯನ್ನೇ ಹೊಂದಿರುವ ‘ಹೌದಪ್ಪ’ ಎನ್ನುವಂತಹ ಅಧಿಕಾರಿಯನ್ನು ಅರ್ಹನೆಂದು ಸರ್ಕಾರ ನೇಮಿಸಿದರೆ, ಆತನಿಗೂ ಈ ಕಾಯ್ದೆಯ ಎಲ್ಲ ನಿಯಮ, ಅಧಿಕಾರ, ಸಂಬಳ, ಸವಲತ್ತು ದೊರೆಯತ್ತದೆ. ಆಗ ಸಂಸ್ಥೆಯ ಸ್ವಾಯತ್ತೆ ಎಲ್ಲಿ ಉಳಿಯಿತು? ಇದು ಚುನಾವಣಾ ಆಯೋಗ; ಸ್ವಾತಂತ್ರ್ಯ ಬಹಳ ಮುಖ್ಯ ಎಂದು ಪೀಠ ಖಚಿತ ಧ್ವನಿಯಲ್ಲಿ ಹೇಳಿತು. ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯಂತಹ ವ್ಯವಸ್ಥೆ ಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಪೈಕಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಕೂಡ ಒಬ್ಬರು. 1990ರ ದಶಕದಲ್ಲಿ ಅವರು ಈ ಆಗ್ರಹ ಮಾಡಿದ್ದರು ಎಂದು ಪೀಠ ಹೇಳಿತು.
ನವದೆಹಲಿ: ವಿಷಯವಾರು ಅರ್ಜಿಗಳ ವಿಚಾರಣೆಗಾಗಿಯೇ ನಾಲ್ಕು ವಿಶೇಷ ಪೀಠಗಳನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ. ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದ, ನೇರ ಮತ್ತು ಪರೋಕ್ಷ ತೆರಿಗೆ ವ್ಯಾಜ್ಯ, ಭೂಸ್ವಾಧೀನದ ತಕರಾರು ಮತ್ತು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ ತೀರ್ಪಿನ ಮೇಲ್ಮನವಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಈ ನಾಲ್ಕು ಪೀಠಗಳು ನಡೆಸಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು. ಭೂಸ್ವಾಧೀನಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ, ಇನ್ಮುಂದೆ ಈ ವಿಷಯವನ್ನು ವಿಶೇಷ ಪೀಠ ಇತ್ಯರ್ಥ ಪಡಿಸಲಿದೆ. ನ್ಯಾ. ಸೂರ್ಯಕಾಂತ್ ನೇತೃತ್ವದ ಪೀಠ ಭೂಸ್ವಾಧೀನ ತಕರಾರಿನ ಅರ್ಜಿಗಳ ವಿಚಾರಣೆ ನಡೆಸಲಿದೆ ಎಂದರು. ಸುಪ್ರೀಂಕೋರ್ಟ್ನ ಪ್ರತಿಯೊಂದು ಪೀಠವೂ ನಿತ್ಯ 10 ಜಾಮೀನು ಕುರಿತು ಅರ್ಜಿಗಳು ಹಾಗೂ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ 10 ವರ್ಗಾವಣೆ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ ಎಂದು ಕಳೆದ ವಾರ ಸಿಜೆಐ ಹೇಳಿದ್ದರು.