

ಪುತ್ತೂರು (ದಕ್ಷಿಣ ಕನ್ನಡ): ಈಕೆ ನನ್ನ ಪ್ರೇಯಸಿ, ನೀನು ಈಕೆಯನ್ನು ಪ್ರೀತಿಸಬಾರದು ಎಂದು ತಾಕೀತು ಮಾಡಿ ಯುವತಿಯ ಮಾಜಿ ಪ್ರಿಯಕರನೊಬ್ಬ ಯುವಕ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಬಾಪೂಜಿ ನಗರದ ಸಾಗರ್ ಹಾಗೂ ದುರ್ಗಾಪ್ರಸಾದ್ ಹಲ್ಲೆಗೊಳಗಾದ ಯುವಕರು.
ಕಳೆದ ಜನವರಿ 28ರಂದು ಯುವತಿ ಪುತ್ತೂರಿನ ಕಂಬಳ ಗದ್ದೆಯ ಸಮೀಪ ಸಾಗರ್ ಎಂಬಾತನೊಂದಿಗೆ ಮಾತನಾಡುತ್ತಾ ನಿಂತಿದ್ದಳು. ಈ ವೇಳೆ ಸ್ಥಳಕ್ಕಾಗಮಿಸಿ ಕೌಶಿಕ್ ಎಂಬಾತ, ನೀನು ಯಾರು? ನಿನಗೂ ಆಕೆಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾನೆ. ಆಗ ಸಾಗರ್ ಈಕೆ ನನ್ನ ಪ್ರೇಯಸಿ ಎಂದು ಹೇಳಿದ್ದಾನೆ.
ಸಾಗರ್ ನನ್ನ ಪ್ರೇಯಸಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ, ಕೋಪಗೊಂಡ ಕೌಶಿಕ್ ಆತನನ್ನು ಹಾಗೂ ಸ್ನೇಹಿತ ದುರ್ಗಾಪ್ರಸಾದ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, ತಾನು ಈಕೆಯ ಪ್ರಿಯಕರ. ನೀನು ಯಾಕೆ ಅವಳನ್ನು ಪ್ರೀತಿ ಮಾಡುತ್ತೀಯಾ? ಎಂದು ಹೇಳಿ ಏಳ್ಮುಡಿ ಎಂಬಲ್ಲಿಗೆ ಬರುವಂತೆ ತಾಕೀತು ಮಾಡಿದ್ದಾನೆ.
ಕೌಶಿಕ್ ಸೂಚಿಸಿದಂತೆ, ಸಾಗರ್ ತನ್ನ ಸ್ನೇಹಿತನೊಂಡಿಗೆ ಏಳ್ಮುಡಿ ಎಂಬಲ್ಲಿಗೆ ಹೋಗಿದ್ದಾನೆ. ಅಲ್ಲಿ ಯುವತಿಯೂ ಇದ್ದಳು. ಈ ವೇಳೆ 6-7 ಜನರು ಸೇರಿಕೊಂಡು, ನಮಗೆ ಇಲ್ಲಿ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಹೀಗಾಗಿ ಯಾರೂ ಇಲ್ಲದ ಸ್ಥಳಕ್ಕೆ ಹೋಗೋಣ ಎಂದು ಹೇಳಿದ್ದಾರೆ. ನಂತರ ಬಲ್ನಾಡ್ ಎಂಬಲ್ಲಿಯ ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಕೌಶಿಕ್ ಹಾಗೂ ಇತರ 6-7 ಯುವಕರು ಸಾಗರ್ ಹಾಗೂ ದುರ್ಗಾಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾರೆ.
ಯುವಕರ ಮೇಲೆ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿದ ಕೌಶಿಕ್ ಮತ್ತು ಆತನ ಸ್ನೇಹಿತರು ಯುವತಿಯನ್ನು ಪ್ರೀತಿ ಮಾಡದಂತೆ ಬೆದರಿಸಿದ್ದಾರೆ. ಮತ್ತಷ್ಟು ಹಲ್ಲೆಗೆ ಮುಂದಾಗುತ್ತಿದ್ದಂತೆ ಸಾಗರ್ ಹಾಗೂ ದುರ್ಗಾಪ್ರಸಾದ್ ಜೋರಾಗಿ ಕೂಗಿದ್ದಾರೆ. ಈ ವೇಳೆ ಸ್ಥಳೀಯರು ಘಟನಾ ಸ್ಥಳಕ್ಕೆ ಬರುವುದು ಗೊತ್ತಾಗುತ್ತಿದ್ದಂತೆ, ಕೌಶಿಕ್ ಮತ್ತು ಆತನ ಸ್ನೇಹಿತರು ಯುವತಿಯ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕಾಲ್ಕಿತ್ತಿದ್ದಾರೆ.
ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್, ಹೇಮಂತ್ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಆರೋಪಿಗಳು.